ಸಮರ್ಪಕ ಸಾರಿಗೆ ಬಸ್ ಸೌಲಭ್ಯಕ್ಕಾಗಿ ಒತ್ತಾಯಿಸಿ ವಿದ್ಯಾರ್ಥಿಗಳು ಎಸ್ಎಫ್ಐ ಮತ್ತು ಡಿ.ವೈ.ಎಫ್.ಐ ನೇತೃತ್ವದಲ್ಲಿ ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿಗೆ ಬೀಗ ಜಡಿದು ಬುಧವಾರ ಪ್ರತಿಭಟಿಸಿದರು.
ನಗರದ ಸಾರಿಗೆ ಇಲಾಖೆಯ ನಿಯಂತ್ರಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕಳೆದ ಹಲವು ತಿಂಗಳುಗಳಿಂದ ಸಾರಿಗೆ ಇಲಾಖೆಗಳಿಗೆ ಮನವಿಗಳನ್ನು ಸಲ್ಲಿಸುತ್ತಿದ್ದೇವೆ. ಆದರೂ ಇದುವರೆಗೂ ಪ್ರಯೋಜನವಾಗಿಲ್ಲ, ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ಬಸ್ಸುಗಳ ಮಾಲೀಕರೊಂದಿಗೆ ಶಾಮೀಲಾಗಿರುವುದರಿಂದ ನಿಗದಿತ ಸಮಯಕ್ಕೆ ಬಸ್ಸುಗಳು ಬಾರದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ, ಬಸ್ಸಿನ ಪಾಸುಗಳನ್ನು ಮಾಡಿಸಿಕೊಂಡಿದ್ದರೂ ಕೂಡಾ ನಮಗೆ ಪ್ರಯೋಜನಕ್ಕೆ ಬರುತ್ತಿಲ್ಲ, ದುಬಾರಿ ಹಣವನ್ನು ಕೊಟ್ಟು ಖಾಸಗಿ ಬಸ್ಸುಗಳಲ್ಲಿ ಬರಬೇಕಾಗಿದೆ. ಬೆಳಿಗ್ಗೆ ೦೮ ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದರೂ ೧೦.೩೦ ಗಂಟೆಯಾದರೂ ಬಸ್ಸುಗಳು ಬಂದಿಲ್ಲ. ಇರುವ ಬಸ್ಸುಗಳ ಬಾಗಿಲುಗಳಲ್ಲಿ ನೇತಾಡಿಕೊಂಡು ಹೋಗಬೇಕು, ಸಂಜೆ ೫ ಗಂಟೆಗೆ ಕಾಲೇಜುಗಳನ್ನು ಬಿಟ್ಟರೂ ಕೂಡಾ ನಾವು ಮನೆಗಳಿಗೆ ಸೇರುವಷ್ಟರಲ್ಲಿ ರಾತ್ರಿ 8 ಗಂಟೆಯಾಗುತ್ತದೆ, ಕೆಲವು ಬಸ್ಸುಗಳು, ಪಾಸುಗಳೇ ಹೆಚ್ಚಾಗಿವೆ ಎನ್ನುವ ಕಾರಣಕ್ಕೆ ಕಾಲೇಜುಗಳ ಬಳಿ ನಿಲ್ಲಿಸುವುದಿಲ್ಲ, ಅವರಿಗಿಷ್ಟ ಬಂದ ಕಡೆಗಳಲ್ಲಿ ಬಸ್ ನಿಲ್ಲಿಸುತ್ತಾರೆ. ಚಾಲಕರು, ಮತ್ತು ನಿರ್ವಾಹಕ ನಡುವಳಿಕೆ ಸರಿಯಿಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ್ದ ಸಾರಿಗೆ ಇಲಾಖೆಯ ಪ್ರಭಾರಿ ವಿಭಾಗೀಯ ನಿಯಂತ್ರಣಾಧಿಕಾರಿ ರವೀಂದ್ರರೆಡ್ಡಿ ಮುಂದಿನ ಮೂರು ದಿನಗಳ ಒಳಗಾಗಿ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವಂತಹ ಸಮಯಕ್ಕೆ ಪ್ರತಿ ೧೫ ನಿಮಿಷಕ್ಕೊಂದರಂತೆ ಬಸ್ಸುಗಳನ್ನು ಕಳುಹಿಸಿಕೊಡಲಾಗುತ್ತದೆ. ಈಗಿರುವ ಸಂಪರ್ಕ ಸಾರಿಗೆಯನ್ನು ಮುಂದುವರೆಸಲಾಗುತ್ತದೆ ಎಂದು ಲಿಖಿತವಾಗಿ ಬರೆದುಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರಿಂದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಬಂದಿದ್ದ ಪ್ರಯಾಣಿಕರು ಪರದಾಡಬೇಕಾಯಿತು.
ಡಿ.ವೈ.ಎಫ್.ಐ ರಾಜ್ಯ ಮುಖಂಡ ಮುನೀಂದ್ರ, ಎಸ್ಎಫ್ಐ ನ ಸುಚಿತ್ರಾ, ಮಾನಸಾ, ವೇದಾ, ಮಂಜುನಾಥ್, ಶಿವಕುಮಾರ್, ರಮೇಶ್, ಜನಾರ್ಧನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







