ಹುಂಡಿಯಲ್ಲಿ, ಮನೆಯಲ್ಲಿ ೧೦ ರೂ ನಾಣ್ಯಗಳನ್ನು ಶೇಖರಿಸಿದ್ದವರ ಮೊಗದಲ್ಲಿ ಆತಂಕ
ಹತ್ತು ರೂಪಾಯಿಯ ನಾಣ್ಯ ಚಲಾವಣೆ ರದ್ದಾಗಿದೆಯಂತೆ ಎಂಬ ಅಂತೆ ಕಂತೆಗಳಿಂದ ಅಂಗಡಿ ಮುಂಗಟ್ಟು ಹೋಟೆಲ್, ಮುಂತಾದ ವ್ಯಾಪಾರ ವಹಿವಾಟುಗಳಲ್ಲಿ ನಾಣ್ಯ ಚಲಾವಣೆ ಸ್ಥಗಿತಗೊಂಡಿದೆ. ೧೦ ರೂಪಾಯಿಯ ನಾಣ್ಯದ ಚಲಾವಣೆ ರದ್ದಾಗಿದೆ ಎಂಬ ವದಂತಿಗಳು ಜನರಲ್ಲಿ ಇನ್ನಿಲ್ಲದ ಆತಂಕಕ್ಕೆ ಕಾರಣವಾಗಿದೆ.
೨೦೦೦ನೇ ಇಸವಿಯಿಂದಲೂ ಈ ವರ್ಷದಲ್ಲೂ ಮುದ್ರಣವಾದ ೧೦ ರೂಪಾಯಿಯ ನಾಣ್ಯಗಳು ಇತರೆ ನಾಣ್ಯಗಳ ಜತೆ ಜತೆಗೆ ಚಲಾವಣೆಯಲ್ಲಿ ಇದ್ದು ಚಿಲ್ಲರೆ ಸಮಸ್ಯೆಯನ್ನು ನೀಗಿಸುವಲ್ಲಿ ತನ್ನದೇ ಆದ ಪಾತ್ರವಹಿಸಿತ್ತು. ಜತೆಗೆ ನಾಣ್ಯ ಸಂಗ್ರಹದ ಹವ್ಯಾಸ ಇರುವವರ ಬಳಿಯಲ್ಲದೆ, ಮಹಿಳೆಯರು ಕೂಡಿಟ್ಟ, ಹುಂಡಿಯಲ್ಲಿ ಹಾಕಿದ ನಾಣ್ಯಗಳೆ ಹೆಚ್ಚಿನ ಸಂಖ್ಯೆಯಲ್ಲಿವೆ.
ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದಲ್ಲಿ ನಗ ನಗದು ಇಡುವ ಸಂಪ್ರದಾಯ ಇದ್ದು ವರಮಹಾಲಕ್ಷ್ಮಿ ಹಬ್ಬಕ್ಕಾಗಿಯೆ ಬಹುತೇಕ ಮಂದಿ ೧೦, ೫, ೨ ಹಾಗೂ ೧ ರೂಪಾಯಿಯ ನಾಣ್ಯಗಳನ್ನು ಶೇಖರಿಸಿಕೊಂಡಿದ್ದು ಅವರೆಲ್ಲರೂ ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.
೧೦ ರೂಪಾಯಿಗಳ ನಾಣ್ಯ ಚಲಾವಣೆ ರದ್ದಾಗಿದೆಯಂತೆ, ೧೦ ರೂಪಾಯಿಯ ನಕಲಿ ನಾಣ್ಯಗಳು ಚಲಾವಣೆಗೆ ಬಂದಿರುವುದರಿಂದ ನಾಣ್ಯಗಳ ಚಲಾವಣೆಯಲ್ಲಿ ರದ್ದುಪಡಿಸಲಾಗಿದೆಯಂತೆ, ಐದುನೂರು ಸಾವಿರ ರೂಪಾಯಿ ನೋಟು ರದ್ದುಪಡಿಸಿದಂತೆ ಇದೀಗ ೧೦ ರೂ ನಾಣ್ಯವನ್ನು ರದ್ದುಪಡಿಸಿದೆಯಂತೆ. ಹೀಗೆ ಹತ್ತು ಹಲವು ರೀತಿಯ ವದಂತಿಗಳು ಜನರ ಮದ್ಯೆ ಹರಿದಾಡತೊಡಗಿವೆ.
ಯಾವ ನಾಣ್ಯದಲ್ಲಿ ರೂ ಚಿನ್ಹೆ ಇಲ್ಲವೋ ಆ ನಾಣ್ಯ ಚಲಾವಣೆ ಇಲ್ಲ ಎಂದು ಕೆಲವರ ವಾದವಾದರೆ, ನಾಣ್ಯದಲ್ಲಿ ೧೦ ಗೆರೆಗಳು ಇರುವ ನಾಣ್ಯವಷ್ಟೆ ಚಲಾವಣೆಯಾಗಲಿದೆ ಎನ್ನುವುದು ಇನ್ನು ಕೆಲವರ ವಾದವಾಗಿದೆ.
ಇಷ್ಟೆ ಅಲ್ಲದೆ ನಾಣ್ಯದಲ್ಲಿ ಇರುವ ಚಿನ್ನದ ಹಾಗೂ ಬೆಳ್ಳಿ ಬಣ್ಣಗಳ ನಡುವಿನ ತೆಳುವಾದ ಗೆರೆಯ ಮೇಲೆ ೧೦ ರೂಪಾಯಿಯ ಸಂಖ್ಯೆ ಮುದ್ರಿತವಾಗಿರುವ ನಾಣ್ಯವಷ್ಟೆ ಅಸಲಿ, ೧೦ ರೂ ಸಂಖ್ಯೆ ನಾಣ್ಯದ ಮದ್ಯೆ ಇದ್ದರೆ ಅದು ನಕಲಿಯಂತೆ, ಹೀಗೆ ನಾಣ್ಯದ ಅಸಲಿ ನಕಲಿಯ ಮಾತುಗಳ ಚರ್ಚೆ ಜೋರಾಗಿ ಸಾಗಿದೆ.
ಈ ಅಂತೆ ಕಂತೆಗಳ ನಡುವೆ ಎಲ್ಲರೂ ತಮ್ಮ ಬಳಿ ಇರುವ ೧೦ ರೂ ನಾಣ್ಯಗಳನ್ನು ಯಾರಿಗಾದರೂ ಕೊಟ್ಟು ಕೈ ತೊಳೆದುಕೊಂಡು ಬಿಡುವ ದಾವಂತದಲ್ಲಿ ಇದ್ದರೆ, ಯಾರೇ ಕೊಟ್ಟರೂ ೧೦ ರೂ ನಾಣ್ಯ ಸ್ವೀಕರಿಸಲು ಉಳಿದವರು ಸಿದ್ದರಿಲ್ಲ.
ಹಾಗಾಗಿ ಯಾವುದೆ ಅಂಗಡಿ ಮುಂಗಟ್ಟು ಹೋಟೆಲ್ ಮುಂತಾದೆಡೆ ಎಲ್ಲೂ ೧೦ ರೂಪಾಯಿಯ ನಾಣ್ಯದ ಚಲಾವಣೆ ಸಂಪೂರ್ಣವಾಗಿ ಸ್ಥಗಿತಗೊಂಡು ಈಗಾಗಲೆ ಇದ್ದ ಚಿಲ್ಲರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.
ಐದುನೂರು, ಸಾವಿರ ರೂ ನೋಟಿನ ಚಲಾವಣೆ ಅಮಾನ್ಯತೆ ಆದಾಗ, ಆ ನಂತರ ಜನ ಸಾಮಾನ್ಯರಲ್ಲಿ ಮನೆ ಮಾಡಿದ್ದ ಆತಂಕ ದಿನ ಕಳೆದಂತೆ ದೂರವಾಗುತ್ತಿರುವ ಈ ಸಮಯದಲ್ಲಿ ೧೦ ರೂ ನಾಣ್ಯದ ಚಲಾವಣೆ ರದ್ದು ಎಂಬ ವದಂತಿ ಮತ್ತೆ ಸಮಸ್ಯೆ, ಆತಂಕವನ್ನು ತಂದೊಡ್ಡಿದೆ.
ಈ ವದಂತಿಗಳಿಂದ ಕಂಗಾಲಾದ ಮಹಿಳೆಯರು ತಮ್ಮ ಬಳಿ ಇರುವ ೧೦ ರೂ ನಾಣ್ಯ, ಹುಂಡಿಯಲ್ಲಿನ ನಾಣ್ಯಗಳನ್ನು ಮಹಿಳಾ ಸ್ವ ಸಹಾಯ ಸಂಘಗಳ ಉಳಿತಾಯದ ಹಣಕ್ಕೆ ಹೊಂದಿಸಿ ಬ್ಯಾಂಕ್‌ಗೆ ಪಾವತಿಸಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಕಳೆದ ಐದಾರು ದಿನಗಳಿಂದಲೂ ಬ್ಯಾಂಕ್‌ಗೆ ಹಣ ಕಟ್ಟಲು ಬರುತ್ತಿರುವ ಮಹಿಳಾ ಸ್ವ ಸಹಾಯ ಸಂಘಗಳ ಪ್ರತಿನಿಗಳ ಬಹುತೇಕ ಮಂದಿ ೧೦ ರೂ ನಾಣ್ಯಗಳನ್ನೆ ತರುತ್ತಿರುವುದು ಬ್ಯಾಂಕ್‌ನವರಿಗೂ ತಲೆ ನೋವಾಗಿದೆ.
‘೧೦ ರೂ ಅಥವಾ ಯಾವುದೆ ನಾಣ್ಯದ ಚಲಾವಣೆಯನ್ನು ಆರ್‌ಬಿಐ ರದ್ದುಪಡಿಸಿಲ್ಲ. ಚಲಾವಣೆಯಲ್ಲಿ ಇರುವ ಎಲ್ಲ ನಾಣ್ಯಗಳು ಎಂದಿನಂತೆ ಚಲಾವಣೆಯಲ್ಲಿವೆ. ಯಾರೋ ಇಂತಹ ವದಂತಿಯನ್ನು ಹರಿದು ಬಿಟ್ಟಿದ್ದು ನಮ್ಮ ಬ್ಯಾಂಕ್‌ಗೂ ಕಳೆದ ಐದಾರು ದಿನಗಳಿಂದಲೂ ೧೦ ರೂ ನಾಣ್ಯಗಳನ್ನು ತಂದು ಕಟ್ಟುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ನಮಗೆ ಬ್ಯಾಂಕ್‌ನ ಇತರೆ ಹಣಕಾಸುವ ವಹಿವಾಟಿಗೆ ಅಡಚಣೆಯಾಗುವಷ್ಟರ ಮಟ್ಟಿಗೆ ೧೦ ರೂ ನಾಣ್ಯಗಳನ್ನು ತಂದು ಕಟ್ಟುವವರ ಸಂಖ್ಯೆ ಹೆಚ್ಚುತ್ತಲೆ ಇದೆ, ನಾವು ನಾಣ್ಯಗಳನ್ನು ಎಂದಿನಂತೆ ಕಟ್ಟಿಸಿಕೊಳ್ಳುತ್ತೇವೆ. ಜತೆಗೆ ಜನ ಸಾಮಾನ್ಯರೂ ಸಹ ಯಾವುದೆ ಅಂಜಿಕೆ ಅಳುಕಿಲ್ಲದೆ ೧೦ ರೂ ನಾಣ್ಯವನ್ನು ಚಲಾವಣೆ ಮಾಡಬಹುದು’ ಎಂದು ಎಸ್‌ಬಿಎಂ ವ್ಯವಸ್ಥಾಪಕಿ ಎನ್.ಹೇಮಲತಾ ತಿಳಿಸಿದರು.
- Advertisement -
- Advertisement -
- Advertisement -