Appegowdanahalli, Sidlaghatta : ಪಶ್ಚಿಮ ಘಟ್ಟ, ಉಷ್ಣವಲಯದ ದೇಶಗಳಲ್ಲಿ ಕಂಡುಬರುವ ಅಪರೂಪದ ಅಣಬೆಯೊಂದು ಬಯಲುಸೀಮೆಯ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಪತ್ತೆಯಾಗಿದೆ.
ಅಪ್ಪೇಗೌಡನಹಳ್ಳಿಯ ರೈತ ಎ.ಎಂ.ತ್ಯಾಗರಾಜ್ ಅವರ ತೋಟದಲ್ಲಿ ಈ ಪುಟ್ಟ ಗಾತ್ರದ ಕಿತ್ತಳೆ ಬಣ್ಣದ ಅಣಬೆ, ನೆಲದಿಂದ ಮೇಲೆದ್ದಿರುವುದು ಅಚ್ಚರಿ ತಂದಿದೆ.
ಅಗಾರಿಕಸ್ ಟ್ರೈಸಲ್ಫುರಾಟಸ್ ಎಂಬ ವೈಜ್ಞಾನಿಕ ಹೆಸರಿನ ಈ ಅಣಬೆಯನ್ನು ಇಂಗ್ಲಿಷಿನಲ್ಲಿ ಸ್ಕೇಲಿ ಟ್ಯಾಂಗರಿನ್ ಮಶ್ರೂಮ್ ಅಥವಾ ಸ್ಕೇಲಿ ಟ್ಯಾಂಗರಿನ್ ಶಿಲೀಂಧ್ರ ಎನ್ನುವರು. ಕಿತ್ತಳೆ ಬಣ್ಣದ ಅಣಬೆಯ ಮೇಲೆ ತ್ರಿಕೋನಾಕಾರದ ಪುಟ್ಟಪುಟ್ಟ ಹುರುಪೆ ರೀತಿಯ ಮಡತೆಗಳು ಮೂಡಿರುತ್ತವೆ.
ಈ ಅಣಬೆಯು ಸಾವಯವವಾಗಿ ಸಮೃದ್ಧವಾಗಿರುವ ಮಣ್ಣಿನಲ್ಲಿ ಅಥವಾ ಚೆನ್ನಾಗಿ ಕೊಳೆತ ಮರದ ಬುಡಗಳಲ್ಲಿ ಬೆಳೆಯುತ್ತದೆ. ಇದು ಸಾಮಾನ್ಯವಾಗಿ ಹುಲ್ಲಿನಿಂದಾವೃತವಾದ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೀನ್ಯಾ, ಥೈಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿನ ಉಷ್ಣವಲಯ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಈ ಅಣಬೆ ಪ್ರಭೇದಗಳು ಕಾಣಸಿಗುತ್ತವೆ. ನಮ್ಮ ಪಶ್ಚಿಮ ಘಟ್ಟಗಳಲ್ಲಿಯೂ ಇವು ಕಂಡುಬರುತ್ತವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
“ಸಾಮಾನ್ಯವಾಗಿ ಬಿಳಿ ಬಣ್ಣದ ಅಣಬೆಗಳು ನಮಗೆ ಪರಿಚಿತ. ನಮ್ಮ ಭಾಗದಲ್ಲಿ ಕಾಣಿಸುತ್ತವೆ. ಆದರೆ ಕೇಸರಿ ಬಣ್ಣದ ಈ ರೀತಿಯ ಅಣಬೆಯನ್ನು ನಮ್ಮ ತೋಟದಲ್ಲಿ ನೋಡಿದ್ದು ಇದೇ ಮೊದಲ ಬಾರಿ. ಸೋಜಿಗವೆನಿಸಿತು” ಎನ್ನುತ್ತಾರೆ ರೈತ ತ್ಯಾಗರಾಜ್.