22 C
Sidlaghatta
Monday, October 13, 2025

ಅಂಕತಟ್ಟಿಯಲ್ಲಿ ಆವತಿನಾಡಪ್ರಭುಗಳ ಶಾಸನ ಪತ್ತೆ

- Advertisement -
- Advertisement -

Ankatatti, Sidlaghatta, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಆವತಿನಾಡಪ್ರಭುಗಳ ಶಾಸನವನ್ನು ಶಾಸನತಜ್ಞ ಕೆ.ಧನಪಾಲ್, ಅಪ್ಪೆಗೌಡನಹಳ್ಳಿಯ ತ್ಯಾಗರಾಜ್ ಮತ್ತು ಡಿ.ಎನ್.ಸುದರ್ಶನರೆಡ್ಡಿ ಅವರು ಪತ್ತೆಹಚ್ಚಿದ್ದಾರೆ.

ಶಾಸನವು ಅಂಕತಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಆವರಣದ ಗೋಡೆಗೆ ಸೇರಿಕೊಂಡಿದ್ದು, ಕ್ಷೇತ್ರಕಾರ್ಯದಲ್ಲಿ ಗಮನಿಸಿದ ಕೆ.ಧನಪಾಲ್ ಮತ್ತು ತಂಡ, ಸ್ಥಳೀಯರಾದ ವೆಂಕಟರೆಡ್ಡಿಯವರ ಸಹಕಾರದಿಂದ ಬಣ್ಣ ಬಳಿದು ವಿರೂಪವಾಗಿದ್ದ ಶಾಸನವನ್ನು ಸ್ವಚ್ಛಗೊಳಿಸಿ, ಅಧ್ಯಯನ ಮಾಡಿ, ಗ್ರಾಮಸ್ಥರಿಗೆ ಶಾಸನ ಹಾಗೂ ಅವುಗಳ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.

ಮಾರ್ಚ್ 3, 1729ರಂದು ವಡಿಗೆನಹಳ್ಳಿಯ(ಇಂದಿನ ವಿಜಯಪುರ) ಚೆನ್ನಕೇಶವ ದೇವಾಲಯದ ಪೂಜಾ ಕೈಂಕರ್ಯಗಳಿಗೆ ಆವತಿನಾಡಪ್ರಭು ಗೋಪಾಲಗೌಡರ ಮಗ ದೊಡ್ಡಬೈರೇಗೌಡರು ಅಂಗತಟ್ಟಿ (ಇಂದಿನ ಅಂಕತಟ್ಟಿ) ಮತ್ತು ಶೆಟ್ಟಿಹಳ್ಳಿ ಗ್ರಾಮಗಳ ತೆರಿಗೆಗಳನ್ನು ದಾನವಾಗಿ ನೀಡಿರುವ ವಿಚಾರವನ್ನು ಈ ಶಾಸನ ತಿಳಿಸುತ್ತದೆ. ವಿಶೇಷವೆಂದರೆ ದಾನ ನೀಡಿದಾಗ ಶಾಸನವನ್ನು ಕೆತ್ತಿ ವಿಜಯಪುರದ ಗೋಪಾಲ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹಾಕಿಸಿ, ನಾಲ್ಕು ದಿನಗಳ ನಂತರ ದಾನನೀಡಿದ ಅಂಕತಟ್ಟಿ ಗ್ರಾಮದಲ್ಲೂ ಇನ್ನೊಂದು ಶಾಸನವನ್ನು ಹಾಕಿರುವರು.

ಆವತಿ ನಾಡಪ್ರಭುಗಳಾಗಿದ್ದ ಗೋಪಾಲಗೌಡರು ತಮ್ಮ ಆಳ್ವಿಕೆಯ ಕಾಲದಲ್ಲಿ ದೇವನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಪೂಜಾ ಕೈಂಕರ್ಯಗಳಿಗೆ ಮೇಲೂರು, ಮಳ್ಳೂರು ಸೇರಿದಂತೆ ಏಳು ಗ್ರಾಮಗಳನ್ನು ದಾನ ನೀಡಿರುವ ಬಗ್ಗೆ ಶಾಸನಗಳ ದಾಖಲೆಯಿದೆ. ಅವರು ಒಂದು ಶಾಸನ ದೇವಸ್ಥಾನದಲ್ಲಿ ಹಾಕಿಸಿ, ದಾನವಾಗಿ ನೀಡಿರುವ ಏಳು ಗ್ರಾಮಗಳಲ್ಲೂ ಶಾಸನವನ್ನು ಹಾಕಿಸಿರುವರು. ಈಗಲೂ ತಾಲ್ಲೂಕಿನ ಮೇಲೂರು ಮತ್ತು ಮಳ್ಳೂರಿನಲ್ಲಿ ಗೋಪಾಲಗೌಡರ ಶಾಸನಗಳಿವೆ. ಅದೇ ರೀತಿ ಅವರ ಮಗ ದೊಡ್ಡಬೈರೇಗೌಡರು ಕೂಡ ವಿಜಯಪುರದಲ್ಲಿರುವ ಚೆನ್ನಕೇಶವ ದೇವಸ್ಥಾನದಲ್ಲಿ ಒಂದು ಶಾಸನವನ್ನೂ ಅದರ ಸೇವಾರ್ಥವಾಗಿ ದಾನ ನೀಡಿರುವ ಅಂಕತಟ್ಟಿ ಗ್ರಾಮದಲ್ಲಿಯೂ ಒಂದು ಶಾಸನವನ್ನು ಹಾಕಿಸಿರುವರು ಎಂದು ಶಾಸನತಜ್ಞ ಧನಪಾಲ್ ವಿವರಿಸಿದರು.

“ಈ ಶಾಸನದಲ್ಲಿ ಉಲ್ಲೇಖವಾಗಿರುವ ಗೋಪಾಲಗೌಡರು ಆವತಿನಾಡಪ್ರಭು ರಣಭೈರೇಗೌಡರ ವಂಶೀಕರು. ಆವತಿನಾಡ ಪ್ರಭುಗಳು 14ನೇ ಶತಮಾನದಲ್ಲಿ ಕಂಚಿ ದಿಕ್ಕಿನಿಂದ ಬಂದು ನಂದಿಸೀಮೆಯ ಕಾರಹಳ್ಳಿಯಲ್ಲಿ ನೆಲೆಗೊಂಡ ಮೇಲೆ ಯಲಹಂಕ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಗಳನ್ನು ಪ್ರತ್ಯೇಕವಾಗಿ ಪಾಲಿಸತೊಡಗುತ್ತಾರೆ. ಗೋಪಾಲಗೌಡರ ವಂಶೀಕರು ದೇವನಹಳ್ಳಿಯಲ್ಲಿ ಇದ್ದಾಗ ಅವರ ಆಡಳಿತ ವ್ಯಾಪ್ತಿ ವಡಿಗೆಹಳ್ಳಿಯೂ ಸೇರಿದಂತೆ ಶಿಡ್ಲಘಟ್ಟದ ಬೂದಾಳದವರೆಗೂ ವಿಸ್ತರಿಸಿರುತ್ತದೆ. ಹೈದರಾಲಿ ದೇವನಹಳ್ಳಿಯನ್ನು ವಶಪಡಿಸಿಕೊಂಡ ನಂತರ ಇವರು ತಮ್ಮ ದಾಯಾದಿಗಳ ಊರಾದ ಚಿಕ್ಕಬಳ್ಳಾಪುರದಕ್ಕೆ ಹೋಗಿಬಿಡುತ್ತಾರೆ” ಎಂದು ಶಾಸನತಜ್ಞ ಡಿ.ಎನ್.ಸುದರ್ಶನರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ವೆಂಕಟರೆಡ್ಡಿ ಹಾಗೂ ಇತರ ಅಂಕತಟ್ಟಿ ಗ್ರಾಮಸ್ಥರು ಹಾಜರಿದ್ದರು.

– ಡಿ.ಜಿ.ಮಲ್ಲಿಕಾರ್ಜುನ

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!