Basavapatna, Sidlaghatta : ಅಗಲಿದ ಜೀವದ ನೆನಪನ್ನು ಕೇವಲ ಕಣ್ಣೀರಿನಲ್ಲಿ ಕಳೆಯದೆ, ಶಾಲಾ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ತಾಲ್ಲೂಕಿನ ಬಸವಾಪಟ್ಟಣ ಗ್ರಾಮದ ಆಂಜಿನಪ್ಪ ಮತ್ತು ನೇತ್ರಾವತಿ ದಂಪತಿ. ತಮ್ಮ ಪುತ್ರ ದಿ. ಚೇತನ್ ಅವರ 4ನೇ ವರ್ಷದ ಸ್ಮರಣಾರ್ಥವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿದರು.
ಶೈಕ್ಷಣಿಕ ಪ್ರೋತ್ಸಾಹ: ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ನೀರಿನ ಬಾಟಲಿ, ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಲಾಯಿತು. ಈ ವೇಳೆ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. “ನಮ್ಮ ಮಗನ ನೆನಪು ಈ ಶಾಲೆಯ ಮಕ್ಕಳ ನಗುವಿನಲ್ಲಿ ಕಾಣಬೇಕು ಎಂಬ ಉದ್ದೇಶದಿಂದ ಈ ಪುಟ್ಟ ಸೇವೆ ಮಾಡಿದ್ದೇವೆ,” ಎಂದು ಚೇತನ್ ಅವರ ಪೋಷಕರು ಭಾವುಕರಾಗಿ ತಿಳಿಸಿದರು.
ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, “ವಾರ್ಷಿಕ ಸ್ಮರಣೋತ್ಸವಗಳನ್ನು ದುಂದುವೆಚ್ಚ ಮಾಡಿ ಆಚರಿಸುವ ಬದಲು, ಇಂತಹ ಶೈಕ್ಷಣಿಕ ಸೇವಾ ಕಾರ್ಯಗಳ ಮೂಲಕ ಆಚರಿಸುವುದು ನಿಜಕ್ಕೂ ಶ್ಲಾಘನೀಯ,” ಎಂದರು.
ಕಾರ್ಯಕ್ರಮದಲ್ಲಿ ಮಾಳಮಾಚನಹಳ್ಳಿ ಗ್ರಾ.ಪಂ ಪಿಡಿಓ ಶೈಲಜಾ, ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಡಿಪಿನಾಯಕನಹಳ್ಳಿ ಸುಬ್ರಮಣಿ, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ಉಮಾದೇವಿ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ರಾಮದಾಸ್ ಹಾಜರಿದ್ದು ಮಕ್ಕಳನ್ನು ಪ್ರೋತ್ಸಾಹಿಸಿದರು.








