ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬುಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಬುದ್ಧನ ನೀತಿ ಮತ್ತು ಸ್ವಾತಂತ್ರ್ಯವನ್ನು ಎಲ್ಲರಿಗೂ ಲಭ್ಯಸಾಧ್ಯವಾಗಿಸುವ ಪ್ರಜಾವ್ಯವಸ್ಥೆಯನ್ನು ಬರಹಗಳ ಮೂಲಕ ನೆನಪಿಸಿದವರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಗ್ರಗಣ್ಯರು. ಭಾರತೀಯ ರಾಷ್ಟ್ರೀಯತೆಯ ಪ್ರತಿಪಾದಕರಾಗಿ ಏಕಾತ್ಮಕ ಶಾಸನ ರೂಪಿಸಿದವರು ಅಂಬೇಡ್ಕರ್ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾದವರ, ದೀನದಲಿತರ ಏಳಿಗೆಗಾಗಿ ದುಡಿದ ಡಾ.ಬಾಬು ಜಗಜೀವನ್‌ರಾಮ್ ಅವರು ದೇಶದ ಬಹುದೊಡ್ಡ ಶಕ್ತಿಯಾಗಿದ್ದರು. ಉಪಪ್ರಧಾನಿಯಾಗಿ ಜಾರಿಗೊಳಿಸಿದ ಅನೇಕ ಕಾರ್ಯಕ್ರಮಗಳು ಇಂದಿಗೂ ಜನಪರವಾಗಿದ್ದು, ಅನುಕರಣೆಗೆ ಯೋಗ್ಯವಾಗಿವೆ. ಪ್ರತಿಯೊಬ್ಬರ ಏಳಿಗೆಗೆ ಅಗತ್ಯ ಶಿಕ್ಷಣ, ಆರ್ಥಿಕ ಸಬಲತೆ ಅಗತ್ಯವಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಸ್ವಾತಂತ್ರ್ಯಾ ನಂತರದಲ್ಲಿ ದೇಶವು ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾಗ ಅಗತ್ಯವಾಗಿದ್ದ ನೀರಾವರಿ ಯೋಜನೆಗಳು, ಕೃಷಿಯೋಜನೆಗಳ ಮೂಲಕ ಹಸಿರುಕ್ರಾಂತಿಯ ಸುಳಿವನ್ನು ನೀಡಿದ ಕೀರ್ತಿಯು ಡಾ.ಬಾಬು ಜಗಜೀವನ್‌ರಾಮ್ ಅವರಿಗೆ ಸಲ್ಲಬೇಕು ಎಂದರು.
ಮುಖ್ಯ ಭಾಷಣಕಾರ ಎನ್.ಚಂದ್ರಶೇಖರ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬುಜಗಜೀವನರಾಂ ಅವರ ಜೀವನ, ಆದರ್ಶ ಮತ್ತು ಸಾಧನೆ ಕುರಿತಂತೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಬಿ.ಕೆ.ಚಂದ್ರಕಾಂತ್, ನಗರ ಸಭೆ ಪೌರಾಯುಕ್ತ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ ಮೂರ್ತಿ, ನಗರ ಠಾಣೆಯ ಪಿಎಸ್ ಐ ಸತೀಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್ ಹಾಜರಿದ್ದರು.