Sidlaghatta : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕೆಂದು ಶಿಕ್ಷಕರು ತಹಶೀಲ್ದಾರ್ ಗಗನ ಸಿಂಧು ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಸರಸ್ವತಮ್ಮ ಮಾತನಾಡಿ, “ಸಮೀಕ್ಷಾ ಕಾರ್ಯದಲ್ಲಿ ತಾಂತ್ರಿಕ ದೋಷಗಳು, ಸರ್ವರ್ ಸಮಸ್ಯೆ, ಭಾಷಾ ಅಡಚಣೆಗಳು, ಸ್ಥಳಾವಕಾಶದ ಕೊರತೆ, ಹಾಗೂ ಶಿಕ್ಷಕರಿಗೆ ಮೂಲಭೂತ ಸೌಲಭ್ಯಗಳ ಅಭಾವದಿಂದಾಗಿ ಕಾರ್ಯನಿರ್ವಹಿಸಲು ತೊಂದರೆ ಎದುರಾಗುತ್ತಿದೆ. ಶಿಕ್ಷಕರಿಗೆ ಗೌರವಧನ, ಭತ್ಯೆ ಹಾಗೂ ಗಳಿಕೆ ರಜೆ ನೀಡಬೇಕು. ಜೊತೆಗೆ ನಿಯೋಜನೆಗಳನ್ನು ಅವರ ಶಾಲಾ ವ್ಯಾಪ್ತಿಯಲ್ಲೇ ಮಾಡಬೇಕು” ಎಂದು ಒತ್ತಾಯಿಸಿದರು.
ಶಿಕ್ಷಕರು ವೈಯಕ್ತಿಕ ಮೊಬೈಲ್ ಮತ್ತು ಇಂಟರ್ನೆಟ್ ಬಳಸಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕಷ್ಟ ಅನುಭವಿಸುತ್ತಿರುವುದರೊಂದಿಗೆ, ಮೊಬೈಲ್ ಆಪ್‌ನಲ್ಲಿ ಹಲವಾರು ದೋಷಗಳು ಎದುರಾಗುತ್ತಿವೆ. ಸಮೀಕ್ಷೆಗೆ ನಿಯೋಜಿಸಲಾದ ಪ್ರದೇಶಗಳ ಯುಎಚ್‌ಐಡಿ ಸಂಖ್ಯೆಗಳ ಪಟ್ಟಿಯನ್ನು ಒದಗಿಸುವಂತೆ ಅವರು ಮನವಿ ಸಲ್ಲಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗಗನ ಸಿಂಧು, ಶಿಕ್ಷಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಸಹ ಕ್ರಮ ಜರುಗಿಸಲಾಗುವುದು ಎಂದರು. ಜೊತೆಗೆ, “ಜಿಲ್ಲಾಧಿಕಾರಿಗಳ ಸೂಚನೆಯಂತೆ ಪ್ರತಿಯೊಬ್ಬರೂ ಕರ್ತವ್ಯಕ್ಕೆ ಹಾಜರಾಗಬೇಕು, ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸುಂದರಾಚಾರಿ ಸೇರಿದಂತೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.