ನಗರದ ಕೋಚಿಮುಲ್ ಕಚೇರಿಯಲ್ಲಿ ಕ್ಯಾಲೆಂಡರ್ ಮತ್ತು ಡೈರಿಯನ್ನು ಬಿಡುಗಡೆ ಮಾಡಿ ಕೋಚಿಮುಲ್-ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ಮಾತನಾಡಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಲು ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಬಳಿ ಪಶು ಆಹಾರ ಘಟಕವನ್ನು ನಿರ್ಮಿಸಲು ಅತಿ ಶೀಘ್ರದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಲಾಗುವುದೆಂದು ಅವರು ತಿಳಿಸಿದರು.
ಸಾದಲಿ ಬಳಿ ಪಶು ಆಹಾರ ಘಟಕವನ್ನು ನಿರ್ಮಿಸಲು 26 ಎಕರೆ ಜಮೀನು ಮಂಜೂರಾಗಿದೆ. ಆದರೆ ಜಮೀನಿನ ಸರ್ವೆ ಮಾಡಿದಾಗ 5 ಎಕರೆ ಕಡಿಮೆ ಬಂದಿದ್ದು ಈ ಸಂಬಂಧ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದ್ದೇವೆ. ಆ ಭಾಗದಲ್ಲಿ ಸಾಗುವಳಿ ಚೀಟಿ ಪಡೆಯಲು ಜನರು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕೃತಗೊಂಡಿದೆ. ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ತಹಶೀಲ್ದಾರ್ ಭರವಸೆ ನೀಡಿದ್ದಾರೆ. ವ್ಯವಸ್ಥಿತವಾಗಿ ಘಟಕವನ್ನು ನಿರ್ಮಿಸಲು ಉಳಿಕೆ 5 ಎಕರೆ ಜಮೀನು ಮಂಜೂರು ಮಾಡಲು ಮನವಿ ಮಾಡಿದ್ದು ಅತಿ ಶೀಘ್ರದಲ್ಲಿ ಘಟಕದ ಕಾಮಗಾರಿಯನ್ನು ಆರಂಭಿಸಲಾಗುವುದೆಂದರು.
ರಾಜ್ಯದ 5 ಭಾಗಗಳಲ್ಲಿ ಪಶು ಆಹಾರ ಘಟಕಗಳನ್ನು ಸ್ಥಾಪಿಸಲಾಗಿದ್ದು, ಅದರಿಂದ ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತಿದೆ. ಸಾದಲಿ ಬಳಿ ಸುಸಜ್ಜಿತ ಪಶು ಆಹಾರ ಘಟಕ ನಿರ್ಮಾಣಗೊಂಡರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಸಹಿತ ಇನ್ನಿತರೆ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದ್ದು, ಬೇರೆ ಕಡೆಯಿಂದ ಪಶು ಆಹಾರವನ್ನು ಸಾಗಾಣಿಕೆ ಮಾಡಲು ಆಗುತ್ತಿದ್ದ ಖರ್ಚು ಉಳಿತಾಯವಾಗಿ, ಸಾದಲಿ ಭಾಗದಲ್ಲಿ ವ್ಯಾಪಾರ-ವಹಿವಾಟು ನಡೆದು ಸ್ಥಳೀಯ ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದಾರೆ ಎಂದರು.
ಹಾಲಿನ ದರ ಏರಿಕೆ ಸಾಧ್ಯತೆ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಹಾಲಿನ ದರವನ್ನು ಏರಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ನಿರ್ದೇಶಕರು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಹಾಲು ಉತ್ಪಾದಕರಿಗೆ ಸಂಕ್ರಾಂತಿ ಹಬ್ಬದ ಕೊಡುಗೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೋಚಿಮುಲ್ ಉಪ ವ್ಯವಸ್ಥಾಪಕ ಡಾ.ಚಂದ್ರಶೇಖರ್, ವಿಸ್ತರಣಾಧಿಕಾರಿಗಳಾದ ಉಮೇಶ್‌ರೆಡ್ಡಿ, ವೈ.ಕುಮ್ಮಣ್ಣ, ಜಯಚಂದ್ರ, ವಿ.ಶ್ರೀನಿವಾಸ್, ಮಂಜುನಾಥ್, ಸಂತೋಷಕುಮಾರ್, ಶಂಕರ್‌ಕುಮಾರ್, ಗುಲಾಬ್‌ಜಾನ್, ಮುನೇಗೌಡ ಹಾಜರಿದ್ದರು.