Sidlaghatta : ರೈತರ ಮನೆ ಬಾಗಿಲಿಗೆ ಹೋಗಿ ರಾಸುಗಳಿಗೆ ಕೃತಕ ಗರ್ಭದರಣೆ ಮಾಡಲಾಗುತ್ತಿದೆ. ಇದರಿಂದ ಉತ್ತಮ ಫಲಿತಾಂಶ ಪಡೆಯುವುದರ ಜೊತೆಗೆ ರೈತರ ಸಮಯವನ್ನು ಉಳಿತಾಯ ಮಾಡಿದಂತಾಗುತ್ತಿದೆ. ಈ ಮೂಲಕ ಹೆಚ್ಚು ರಾಸುಗಳನ್ನು ಪಡೆಯುವುದರ ಜೊತೆಗೆ ಹಾಲು ಉತ್ಪಾದನೆ ವೃದ್ಧಿಯಾಗಿ ಪಶು ಸಂಪತ್ತು ಹೆಚ್ಚಾಗಬೇಕು ಎನ್ನುವುದು ನಮ್ಮೆಲ್ಲರ ಆಶಯ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ತಿಳಿಸಿದರು.
ರೈತರ ಮನೆ ಬಾಗಿಲಿಗೆ ಹೋಗಿ ರಾಸುಗಳ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಕುರಿತಂತೆ ಮಾಹಿತಿ ನೀಡಿ ಅವರು ಮಾತನಾಡಿದರು.
ಸಾಮಾನ್ಯವಾಗಿ ರೈತರು ರಾಸುಗಳನ್ನು ಕೃತಕ ಗರ್ಭಧಾರಣೆಗಾಗಿ ಆಸ್ಪತ್ರೆಯ ಬಳಿ ತರುವುದು ವಾಡಿಕೆ. ಆಸ್ಪತ್ರೆಗಳಲ್ಲಿ -196 ಡಿಗ್ರಿ ಸೆಂಟಿ ಗ್ರೇಡ್ ಉಷ್ಣಾಂಶದಲ್ಲಿ ಇರುವ ದ್ರವಸಾರಜನಕದಲ್ಲಿ ವೀರ್ಯ ನಳಿಕೆಗಳನ್ನು 35,50, ಲೀಟರ್ ಕೆಪ್ಯಾಸಿಟಿವುಳ್ಳ ಜಾಡಿಗಳಲ್ಲಿ ಸಂಗ್ರಹಿಸಿ ರಾಸುಗಳಿಗೆ ಕೃತ ಗರ್ಭಧಾರಣೆ ಮಾಡುತ್ತೇವೆ . ಇತ್ತೀಚಿನ ದಿನಗಳಲ್ಲಿ0.5ಲೀಟರ್,1 ಲೀಟರ್,1.5 ಲೀಟರ್ ದ್ರವಸಾರ ಜಾನಕ ಜಾಡಿಗಳನ್ನು ಸುಲಭವಾಗಿ ರೈತರ ಮನೆ ಬಾಗಿಲಿಗೆ ಕೊಂಡೊಯ್ದು ಕೃತಕಗರ್ಭದರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಹೊರದೇಶದ ಎಚ್.ಎಫ್, ಜರ್ಸಿ ತಳಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕೊಡುತ್ತವೆ. ನಮ್ಮಲ್ಲಿನ ಸ್ಥಳೀಯ ಜಾನುವಾರುಗಳನ್ನೇ ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಈ ತಳಿಗಳನ್ನು ಸಂಕರಗೊಳಿಸಿ ಹೆಚ್ಚು ಹಾಲಿನ ಉತ್ಪಾದನೆ ನೀಡುವ ತಳಿಯನ್ನು ಪಡೆಯುವ ವಿಧಾನವೇ ಕೃತಕ ಗರ್ಭಧಾರಣೆ.
ಕೃತಕ ಗರ್ಭಧಾರಣೆಯಿಂದ ಹುಟ್ಟುವ ತಳಿಯು ದೇಶಿ ತಳಿಗಳ ಮುಖ್ಯ ಲಕ್ಷಣಗಳಾದ ಅಧಿಕ ರೋಗನಿರೋಧಕತೆ, ಹೆಚ್ಚು ಆಹಾರ ಪರಿವರ್ತನೆ ಸಾಮರ್ಥ್ಯ, ಕಡಿಮೆ ದರ್ಜೆಯ ಆಹಾರವನ್ನು ಉತ್ತಮವಾಗಿ ಬಳಸಿಕೊಳ್ಳುವ ಲಕ್ಷಣ, ಉಷ್ಣ ಸಹಿಷ್ಣುತೆ, ಇವುಗಳ ಜೊತೆಗೆ ಅಧಿಕ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಪಡೆದುಕೊಂಡು ರೈತನಿಗೆ ಅಧಿಕ ಲಾಭವನ್ನು ತಂದುಕೊಡುತ್ತದೆ. ಇದಕ್ಕೆ ತಗಲುವ ವೆಚ್ಚವೂ ಬಹಳ ಕಡಿಮೆ ಎಂದು ವಿವರಿಸಿದರು.
“ಹಸುಗಳನ್ನು ಪಶು ವೈದ್ಯಾಧಿಕಾರಿಗಳ ಬಳಿ ಕರೆದುಕೊಂಡು ಹೋಗುವುದು ತ್ರಾಸ ಕೆಲಸ. ಅನೇಕ ಸಂದರ್ಭಗಳಲ್ಲಿ ಹಸುಗಳು ಬೆದರುವುದರಿಂದ ಫಲ ಕಟ್ಟುವುದಿಲ್ಲ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಇದೀಗ ಪಶುವೈದ್ಯರು ಮನೆಗೇ ಬಂದು ಹಸುವಿಗೆ ದೊಡ್ಡಿಯಲ್ಲಿಯೇ ಕೃತಕ ಗರ್ಭಧಾರಣೆ ಮಾಡುತ್ತಿರುವುದು ಅನುಕೂಲಕರವಾಗಿದೆ” ಎನ್ನುತ್ತಾರೆ ರೈತ ಮುನಿರೆಡ್ಡಿ.