Sidlaghatta, Chikkaballapur : ಮುಂದಿನ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಡ್ಲಘಟ್ಟ ತಾಲ್ಲೂಕಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡುವ ಉದ್ದೇಶದಿಂದ ನಗರಸಭೆಯ ಪೌರಾಯುಕ್ತೆ ಅಮೃತ ಅವರು ಸ್ವತಃ ಸ್ವಚ್ಛತಾ ಕಾರ್ಯಗಳ ಮೇಲ್ವಿಚಾರಣೆ ಆರಂಭಿಸಿದ್ದಾರೆ.
ನಗರದ ಟಿ.ಬಿ. ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛತಾ ಕ್ರಮಗಳನ್ನು ಪರಿಶೀಲಿಸಿದ ಪೌರಾಯುಕ್ತೆ ಅಮೃತ ಅವರು, ರಸ್ತೆಯ ಬದಿಯಲ್ಲಿ ಹೂವಿನ ತ್ಯಾಜ್ಯ ಎಸೆಯುತ್ತಿದ್ದ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು ಹಾಗೂ ದಂಡ ವಿಧಿಸಲು ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದರು.
“ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡುವುದು ಎಲ್ಲರ ಜವಾಬ್ದಾರಿ. ನಗರಸಭೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಾಗರಿಕರು ಸಹ ನಮ್ಮೊಂದಿಗೆ ಕೈಜೋಡಿಸಬೇಕು,” ಎಂದು ಅವರು ವಿನಂತಿಸಿದರು.
ಪ್ರತಿದಿನ 31 ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಕಾರ್ಯಕ್ಕೆ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ನಾಗರಿಕರು ತಮ್ಮ ಮನೆಗಳಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ, ನಗರಸಭೆಯ ವಾಹನಗಳಿಗೆ ನೀಡಬೇಕು ಎಂದು ಅವರು ಹೇಳಿದರು. “ರಸ್ತೆಗಳಲ್ಲಿ ಕಸ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.
ಇದಲ್ಲದೆ ಇತ್ತೀಚಿನ ಮಳೆಗಾಲದ ಹಿನ್ನೆಲೆಯಲ್ಲಿ ನಾಗರಿಕರಿಗೆ ಮುನ್ನೆಚ್ಚರಿಕೆ ನೀಡಿದ ಅವರು, “ಮಳೆಯ ನೀರು ಸರಾಗವಾಗಿ ಹರಿಯದಿದ್ದರೆ ಕೂಡಲೇ ನಗರಸಭೆಯ ಆರೋಗ್ಯ ಶಾಖೆಗೆ ಮಾಹಿತಿ ನೀಡಬೇಕು. ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ,” ಎಂದು ಹೇಳಿದರು.
ನಗರದಾದ್ಯಂತ ಸ್ವಚ್ಛತಾ ಸಿಬ್ಬಂದಿ, ಆರೋಗ್ಯ ನಿರೀಕ್ಷಕರು ಹಾಗೂ ನಗರಸಭಾ ಅಧಿಕಾರಿಗಳು ಸಂಯುಕ್ತ ಕಾರ್ಯಾಚರಣೆ ನಡೆಸುತ್ತಿದ್ದಾರೆ.







