Sidlaghatta : ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಿಂದ ಬೇರ್ಪಟ್ಟು ‘ಚಿಮುಲ್’ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಮಹತ್ವದ ಚುನಾವಣೆಗೆ ಕೌಂಟ್ ಡೌನ್ ಆರಂಭವಾಗಿದೆ. ಫೆಬ್ರವರಿ 1ರಂದು ನಡೆಯಲಿರುವ ಈ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರಕ್ಕೆ ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡುವ ಐತಿಹಾಸಿಕ ಅವಕಾಶ ಲಭಿಸಿದೆ.
ಕ್ಷೇತ್ರ ಪುನರ್ ವಿಂಗಡಣೆ: ಆಕಾಂಕ್ಷಿಗಳಿಗೆ ಆಘಾತ ಈ ಹಿಂದೆ ಶಿಡ್ಲಘಟ್ಟ ಒಂದೇ ಕ್ಷೇತ್ರವಾಗಿದ್ದು, ಮಹಿಳಾ ಡೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಂಘಗಳು ಇದರ ವ್ಯಾಪ್ತಿಯಲ್ಲಿದ್ದವು. ಆದರೆ ಈಗ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಲೆಕ್ಕಾಚಾರ ಉಲ್ಟಾ ಆಗಿದೆ:
- ಗುಡಿಬಂಡೆ ಸೇರ್ಪಡೆ: ದಿಬ್ಬೂರಹಳ್ಳಿ, ಸಾದಲಿ ಹಾಗೂ ಎಸ್.ದೇವಗಾನಹಳ್ಳಿ ವ್ಯಾಪ್ತಿಯ 20 ಡೇರಿಗಳು ಗುಡಿಬಂಡೆ ಕ್ಷೇತ್ರಕ್ಕೆ ಸೇರಿವೆ.
- ಬಾಗೇಪಲ್ಲಿ ಸೇರ್ಪಡೆ: ತಲಕಾಯಲಬೆಟ್ಟ ಹಾಗೂ ಈ.ತಿಮ್ಮಸಂದ್ರ ವ್ಯಾಪ್ತಿಯ 13 ಡೇರಿಗಳು ಬಾಗೇಪಲ್ಲಿ ಪಾಲಾಗಿವೆ. ಈ ಬದಲಾವಣೆಯಿಂದಾಗಿ ಹಲವು ಪ್ರಭಾವಿ ಆಕಾಂಕ್ಷಿಗಳ ಸ್ಪರ್ಧೆಯ ಆಸೆಗೆ ತಣ್ಣೀರು ಬಿದ್ದಂತಾಗಿದೆ.

ದಳದಲ್ಲಿ ಶಾಸಕರೇ ‘ಬಾಸ್’, ಕಾಂಗ್ರೆಸ್‌ನಲ್ಲಿ ಬಣಗಳ ಕಾದು ನೋಡುವ ತಂತ್ರ ಚುನಾವಣಾ ಕಣದಲ್ಲಿ ಪ್ರಮುಖವಾಗಿ ಎರಡು ಪಕ್ಷಗಳ ನಡುವೆ ಹಣಾಹಣಿ ಏರ್ಪಡುವ ಲಕ್ಷಣಗಳಿವೆ:
- ಜೆಡಿಎಸ್ ವಲಯ: ಇಲ್ಲಿ ಶಾಸಕ ಬಿ.ಎ.ರವಿಕುಮಾರ್ ಅವರ ತೀರ್ಮಾನವೇ ಅಂತಿಮ. ಶಿಡ್ಲಘಟ್ಟದಿಂದ ಹಿರಿಯ ಸಹಕಾರಿ ಬಂಕ್ ಮುನಿಯಪ್ಪ ಹಾಗೂ ರಘುನಾಥರೆಡ್ಡಿ ಹೆಸರು ಚಾಲ್ತಿಯಲ್ಲಿದ್ದರೆ, ಜಂಗಮಕೋಟೆ ಕ್ಷೇತ್ರದಿಂದ ಹುಜಗೂರು ರಾಮಯ್ಯ ಮುಂಚೂಣಿಯಲ್ಲಿದ್ದಾರೆ.
- ಕಾಂಗ್ರೆಸ್ ವಲಯ: ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಹಾಗೂ ನಾಯಕರ ಅನುಪಸ್ಥಿತಿ ಆಯ್ಕೆಯನ್ನು ವಿಳಂಬಗೊಳಿಸಿದೆ. ಮಾಜಿ ನಿರ್ದೇಶಕ ಆರ್.ಶ್ರೀನಿವಾಸ್ ಮರು ಆಯ್ಕೆಯ ಹಂಬಲದಲ್ಲಿದ್ದರೆ, ಕೆ.ಗುಡಿಯಪ್ಪ ಅವರ ಹೆಸರೂ ಕೇಳಿಬರುತ್ತಿದೆ. ಆದರೆ, ಮಾಜಿ ಸಚಿವ ವಿ.ಮುನಿಯಪ್ಪ ಅವರ ಪುತ್ರ ಶಶಿಧರ್ ಮುನಿಯಪ್ಪ ವಿದೇಶದಿಂದ ಬಂದ ನಂತರವಷ್ಟೇ ಕೈ ಪಾಳಯದಲ್ಲಿ ಸಭೆಗಳು ಕಳೆಗಟ್ಟಲಿವೆ.
ಸದ್ಯಕ್ಕೆ ಪ್ರಚಾರ ಬಹಿರಂಗವಾಗಿ ಕಾಣದಿದ್ದರೂ, ಡೇರಿಗಳ ಡೆಲಿಗೇಟ್ಸ್‌ಗಳ ಮನೆಗೆ ತೆರಳಿ ಮೌಖಿಕ ಬೆಂಬಲ ಕೋರುವ ಕಾರ್ಯ ತೆರೆಮರೆಯಲ್ಲಿ ಭರ್ಜರಿಯಾಗಿ ಸಾಗಿದೆ.








