Sidlaghatta : ದೀರ್ಘ ಕಾಲದ ಕುತೂಹಲಕ್ಕೆ ತೆರೆ ಬಿದ್ದಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ (ಚಿಮುಲ್) ಚುನಾವಣೆಗೆ ಕಾಂಗ್ರೆಸ್ ತನ್ನ ‘ಕೈ’ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಕೋಚಿಮುಲ್ ಮಾಜಿ ನಿರ್ದೇಶಕ ಆರ್. ಶ್ರೀನಿವಾಸ್ ಹಾಗೂ ಹಿರಿಯ ಮುಖಂಡ ಬೆಳ್ಳೂಟಿ ಚೊಕ್ಕೇಗೌಡ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.
ಮಂಗಳವಾರ ತಾಲ್ಲೂಕಿನ ಹಂಡಿಗನಾಳದ ಮಾಜಿ ಶಾಸಕ ವಿ. ಮುನಿಯಪ್ಪ ಅವರ ನಿವಾಸದಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಾಂಗ್ರೆಸ್ ಮುಖಂಡ ಶಶಿಧರ್ ಮುನಿಯಪ್ಪ ಅವರು ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.
ಈ ಚುನಾವಣೆಗೆ ಅಖಂಡ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ. ಗುಡಿಯಪ್ಪ ಮತ್ತು ಯುವ ಮುಖಂಡ ಚಿಕ್ಕತೇಕಹಳ್ಳಿ ಪ್ರದೀಪ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಸಭೆಯಲ್ಲಿ ರಾಜಕೀಯ ಸನ್ನಿವೇಶ, ವಿರೋಧ ಪಕ್ಷಗಳ ಬಲ ಹಾಗೂ ಗೆಲುವಿನ ಸಾಧ್ಯತೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಪಕ್ಷದ ಹಿತದೃಷ್ಟಿಯಿಂದ ಕೆ. ಗುಡಿಯಪ್ಪ ಮತ್ತು ಪ್ರದೀಪ್ ಅವರು ತಮ್ಮ ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ ಒಮ್ಮತದ ಅಭ್ಯರ್ಥಿಗಳಿಗೆ ದಾರಿ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, “ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದೇ ನಮ್ಮ ಗುರಿ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಭೆಯಲ್ಲಿ ಪುಟ್ಟು ಆಂಜಿನಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎ. ನಾಗರಾಜ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.








