Sidlaghatta : ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ(ಚಿಮುಲ್)ದ ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ ಎಂಬ ಸಂದೇಶವನ್ನು ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ಅವರು ಮನವಿ ಮಾಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಚಿಮುಲ್ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಚಿಮುಲ್‌ನ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳ ಪರ ಮತಯಾಚಿಸಿ ಅವರು ಮಾತನಾಡಿದರು.
ಜಂಗಮಕೋಟೆ ಕ್ಷೇತ್ರದಿಂದ ಆರ್.ಶ್ರೀನಿವಾಸ್ ಮತ್ತು ಶಿಡ್ಲಘಟ್ಟ ಕ್ಷೇತ್ರದಿಂದ ಚೊಕ್ಕೇಗೌಡ ಅವರು ಸ್ಪರ್ಧಿಸಿದ್ದು, ಇಬ್ಬರು ಕೂಡ ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು. ಸ್ವತಃ ಕೃಷಿಕರಾಗಿದ್ದು ಕೃಷಿ ಕುಟುಂಬದ ಹಿನ್ನಲೆಯುಳ್ಳ ಇವರು ಕೃಷಿಕರ ಕಷ್ಟ ಕಾರ್ಪಣ್ಯವನ್ನು ತಿಳಿದವರಾಗಿದ್ದಾರೆ. ಹಾಗಾಗಿ ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಒಂದಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಈ ಇಬ್ಬರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ ಎಂಬ ಸಂದೇಶವನ್ನು ನೀಡಬೇಕು ಎಂದು ಮನವಿ ಮಾಡಿದರು.
ಚಿಮುಲ್ ಅಭ್ಯರ್ಥಿಗಳಾದ ಆರ್.ಶ್ರೀನಿವಾಸ್, ಬೆಳ್ಳೂಟಿ ಚೊಕ್ಕೇಗೌಡ ಅವರು ಮತಯಾಚಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ನಾಗರಾಜ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ನಿರಂಜನ್, ಬೆಳ್ಳೂಟಿ ವೆಂಕಟೇಶ್, ಡಿ.ಪಿ.ನಾಗರಾಜ್, ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ, ಎಂ.ಆರ್.ಮುನಿಕೃಷ್ಣಪ್ಪ, ತಿಮ್ಮನಾಯಕನಹಳ್ಳಿ ಆನಂದ್ ಹಾಜರಿದ್ದರು.
ಕಾಂಗ್ರೆಸ್ ಭವನದಲ್ಲಿ ನಡೆದ ಚಿಮುಲ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ಅವರು ತಮ್ಮ ಪತಿ ರಾಜೀವ್ ಗೌಡ ಅವರನ್ನು ನೆನೆದು ಭಾವುಕರಾದರು. ಇಂದು ಬೆಳಗ್ಗೆ ರಾಜೀವ್ ಗೌಡರನ್ನು ಭೇಟಿ ಮಾಡಿ ಇಲ್ಲಿಗೆ ಬಂದೆ. ಆಗಲೂ ಅವರು ಕ್ಷೇತ್ರದ ಜನರ ಬಗ್ಗೆ ಚಿಂತಿಸಿದರೆ ಹೊರತು ತನಗೆ ಎದುರಾಗಿರುವ ಸಂಕಷ್ಟದ ಬಗ್ಗೆ ಮಾತನಾಡಲಿಲ್ಲ ಎಂದರು.
ಕಷ್ಟ ಯಾರಿಗೆ ಬರಲ್ಲ ಹೇಳಿ. ಕತ್ತಲಾದ ಮೇಲೆ ಬೆಳಕು ಹರಿಯುವಂತೆ ರಾಜೀವ್ ಗೌಡರಿಗೆ ಇದೀಗ ಎದುರಾಗಿರುವ ಸಂಕಷ್ಟ ಕೂಡ ಕತ್ತಲೆಯಂತೆ ಕರಗುತ್ತದೆ ಎಂದು ಆಶಿಸಿದರು.
ಅವರು ಕಳೆದ ಏಳು ವರ್ಷಗಳಿಂದಲೂ ರಾತ್ರಿ ಹಗಲು ಕಾಂಗ್ರೆಸ್ ಕಾಂಗ್ರೆಸ್ ಎಂದು ಪಕ್ಷ, ಕಾರ್ಯಕರ್ತರ ಬಗ್ಗೆ ಚಿಂತಿಸಿದ್ದಾರೆ, ದುಡಿದಿದ್ದಾರೆ. ಒಂದೆರಡು ದಿನಗಳಲ್ಲಿ ಮತ್ತೆ ನಿಮ್ಮೊಂದಿಗೆ ಬಂದು ಸೇರಿಕೊಳ್ಳುತ್ತಾರೆ ಎಂದು ಹೇಳಿ ಗದ್ಗದಿತರಾದರು.
ನಗರಸಭೆ ಪೌರಾಯುಕ್ತೆ ಅಮೃತ ಅವರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪತಿ ರಾಜೀವ್ ಗೌಡರು ನ್ಯಾಯಾಂಗ ಬಂಧನದಲ್ಲಿದ್ದರೂ ಕೂಡ ಸಹನಾ ರಾಜೀವ್ ಗೌಡ ಅವರು ಚಿಮುಲ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿ ಚುನಾವಣೆ ಪ್ರಚಾರ ಮಾಡಿದ ಬಗ್ಗೆ ಕಾಂಗ್ರೆಸ್ ನಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಶಿಡ್ಲಘಟ್ಟದ ಕಾಂಗ್ರೆಸ್ ನ ನಾಯಕತ್ವದ ಗೊಂದಲ ಇನ್ನೂ ಮುಂದುವರೆದಿದೆ. ಬ್ಲಾಕ್ ಕಾಂಗ್ರೆಸ್ ನಿಂದ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಚಿಮುಲ್ ಚುನಾವಣೆಯ ಪೂರ್ವಭಾವಿ ಸಭೆಗೆ ಶಶಿಧರ್ ಮುನಿಯಪ್ಪ ಮತ್ತು ಪುಟ್ಟು ಆಂಜಿನಪ್ಪ ಗೈರಾಗಿದ್ದರು.
ನಾಲ್ಕೈದು ದಿನಗಳ ಹಿಂದೆ ಮಾಜಿ ಸಚಿವ ವಿ.ಮುನಿಯಪ್ಪ ಅವರ ಹಂಡಿಗನಾಳದ ನಿವಾಸದಲ್ಲಿ ಶಶಿಧರ್ ಮುನಿಯಪ್ಪ ನೇತೃತ್ವದಲ್ಲಿ ನಡೆದ ಚಿಮುಲ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ಸೇರಿದಂತೆ ರಾಜೀವ್ಗೌಡರ ಬಣದ ಮುಖಂಡರು ಗೈರಾಗಿದ್ದರು.
6 ವರ್ಷಗಳ ನಂತರ ಶಿಡ್ಲಘಟ್ಟದ ಸಕ್ರೀಯ ರಾಜಕಾರಣಕ್ಕೆ ಬಂದಿರುವ ಶಶಿಧರ್ ಮುನಿಯಪ್ಪ ಅವರು ಇನ್ನು ಮುಂದೆ ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ಬಣಗಳು ಇರುವುದಿಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವುದಾಗಿ ಹೇಳಿದ್ದರು.








