ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಶನಿವಾರ ಸರ್ ಎಂ.ವಿ ಕಾರ್ಮಿಕರ ಸಂಘದ ಪದಾಧಿಕಾರಿಗಳೊಂದಿಗೆ ತಾಲ್ಲೂಕಿನ ವಿವಿದೆಡೆ ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡ ಕಾರ್ಮಿಕರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿ ಸರ್ ಎಂ.ವಿ ಕಾರ್ಮಿಕರ ಸಂಘದ ಅಧ್ಯಕ್ಷ ಡಿ.ಆರ್.ನಾರಾಯಣಸ್ವಾಮಿ ಮಾತನಾಡಿದರು.
ರಾಜ್ಯಾದ್ಯಂತ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ 14 ದಿನಗಳ ಜನತಾ ಕರ್ಫ್ಯೂ ನಿಂದ ಕಾರ್ಮಿಕ ವರ್ಗದವರು ಸಂಕಷ್ಟಕ್ಕೆ ಸಿಗಬಾರದು ಎನ್ನುವ ಉದ್ದೇಶದಿಂದ ಸಂಘಟನೆಯಿಂದ ಕಾರ್ಮಿಕರಿಗೆ ಮದ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸರ್ಕಾರ ಜಾರಿ ಮಾಡಿರುವ ಜನತಾ ಕರ್ಫ್ಯೂನಿಂದಾಗ ಬಹಳಷ್ಟು ವಲಸೆ ಕಾರ್ಮಿಕರು ಸೇರಿದಂತೆ ನಿರ್ಗತಿಕರು ಹಾಗು ಬೀದಿ ಬದಿ ವ್ಯಾಪಾರಿಗಳಿಗೆ ಬಹಳ ತೊಂದರೆಯಾಗಿದೆ. ಪ್ರತಿಯೊಬ್ಬ ಕಾರ್ಮಿಕರು ಕಾರ್ಮಿಕರ ಕಾರ್ಡ್ ಮಾಡಿಸಿಕೊಳ್ಳುವ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು.
ಸಂಘದ ಉಪಾಧ್ಯಕ್ಷ ಕೇಶವಪುರ ಮುನಿಕೃಷ್ಣಪ್ಪ ಮಾತನಾಡಿ ವಿಶ್ವ ಕಾರ್ಮಿಕರ ದಿನಾಚರಣೆ ಎಂಬುದು ಎಲ್ಲಾ ಕಾರ್ಮಿಕರಿಗೆ ದೊಡ್ಡ ಹಬ್ಬವಿದ್ದಂತೆ ಆದರೆ ರಾಜ್ಯಾದ್ಯಂತ ಕೋರೋನ ಲಾಕ್ ಡೌನ್ ಆಗಿರುವ ಕಾರಣ ಸಂಘದ ವತಿಯಿಂದ ಈ ಭಾರಿಯ ಕಾರ್ಮಿಕರ ದಿನಾಚರಣೆಯನ್ನು ಬಹಳ ಸರಳವಾಗಿ ಆಚರಿಸುವ ಮೂಲಕ ಸಂಘದ ವತಿಯಿಂದ ತಾಲೂಕಿನ ನಿರ್ಗತಿಕರು ಹಾಗು ವಲಸೆ ಕಾರ್ಮಿಕರಿಗೆ ಈ ಲಾಕ್ ಡೌನ್ ಮುಗಿಯುವವರೆಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ತಾಲ್ಲೂಕಿನಾಧ್ಯಂತ ಸುಮಾರು ನೂರಕ್ಕೂ ಹೆಚ್ಚು ಕಾರ್ಮಿಕರು ಸೇರಿದಂತೆ ನಿರ್ಗತಿಕರಿಗೆ ಮಧ್ಯಾಹ್ನದ ಊಟಕ್ಕಾಗಿ ಆಹಾರದ ಪೊಟ್ಟಣ ಸೇರಿದಂತೆ ಕುಡಿಯುವ ನೀರನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸರ್ ಎಂ.ವಿ ಕಾರ್ಮಿಕರ ಸೇವಾ ಸಂಘದ ಖಜಾಂಚಿ ಕೆ.ಸಿ.ನರಸಿಂಹಯ್ಯ, ಪದಾಧಿಕಾರಿಗಳಾದ ಶ್ರೀನಿವಾಸ್ ರಾಮಕೃಷ್ಣ. ಶ್ರೀನಾಥ್. ಮುನೇಗೌಡ. ಚಂದ್ರಪ್ಪ ಮತ್ತಿತರರು ಹಾಜರಿದ್ದರು.