ಮಕ್ಕಳು ಕೇವಲ ಪಠ್ಯಕಲಿಕೆಯ ಕಡೆಗೆ ಮಾತ್ರ ಒತ್ತು ನೀಡದೇ ಪಠ್ಯೇತರ ಚಟುವಟಿಕೆಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಅಭಿವ್ಯಕ್ತಿಪಡಿಸಿಕೊಳ್ಳುವಲ್ಲಿ ಲಭ್ಯ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಶಿಸ್ತು, ಸಂಯಮ, ವಿನಯತೆ ಮಕ್ಕಳಲ್ಲಿ ವೃದ್ಧಿಯಾಗಬೇಕು. ಉತ್ತಮ ಆರೋಗ್ಯಕ್ರಮಗಳನ್ನು ಅನುಸರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಮಜರೆ ಹಾಲ್ಕುಂಟೆ ಬಳಿಯ ಬಾಲಾಜಿ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಜಿಲ್ಲಾ ನೆಹರು ಯುವಕೇಂದ್ರ, ಕರ್ನಾಟಕ ಗಾಂಧೀಸ್ಮಾರಕ ನಿಧಿ, ರಾಷ್ಟ್ರೀಯ ಯುವಯೋಜನೆ, ಸುಗಟೂರು ಹಿರಿಯ ಪ್ರಾಥಮಿಕ ಶಾಲೆಯ ಸುಂದರಲಾಲ್‌ಬಹುಗುಣ ಇಕೋಕ್ಲಬ್ ವತಿಯಿಂದ ಜಂಟಿ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಕೊರೋನಾ ಜಾಗೃತಿ ಕಾರ್ಯಕ್ರಮ, ಆರೋಗ್ಯಸಿಬ್ಬಂದಿಗೆ ಕೊರೋನಾ ವಾರಿಯರ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಮೂಡಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಮಕ್ಕಳ ಸರ್ವಾಂಗೀಣ ಪ್ರಗತಿ ಕಾಣಲು ಪೋಷಕರು, ಶಿಕ್ಷಕರೊಂದಿಗೆ ಎಲ್ಲರೂ ಕೈಜೋಡಿಸಬೇಕು. ಕೊರೋನಾದಂತಹ ಸಾಂಕ್ರಾಮಿಕ ರೋಗಗಳ ತಡೆಯಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದು ಎಂದು ತಿಳಿಸಿದರು.
ಜಂಗಮಕೋಟೆ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಅಂಬಿಕಾ ಮಾತನಾಡಿ, ಕೊರೋನಾ ಲಸಿಕೆ ಬಂದಿದ್ದಾಗ್ಯೂ ರೋಗಹರಡದಂತೆ ಕ್ರಮವಹಿಸಬೇಕು. ದೇಹದ ಅಂಗಾಂಗಗಳಲ್ಲಿ ನಿರಂತರ ಸ್ವಚ್ಚತೆ ಕಾಯ್ದುಕೊಳ್ಳುವುದರಿಂದ ಅನೇಕ ಕಾಯಿಲೆಗಳನ್ನು ಮುಕ್ತಗೊಳಿಸಬಹುದು. ವೈರಸ್‌ಗಳಿಮದ ಹರಡುವ ಕಾಯಿಲೆಗಳು, ಪರಿಹಾರಗಳ ಕುರಿತು ಅರಿವು ಅಗತ್ಯ ಎಂದರು.
ರಾಷ್ಟ್ರೀಯ ಯುವಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಕ್ಷೀಣಿಸದಂತೆ ಗಮನವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗುರಿ ಮತ್ತು ಗುರುವಿನ ಮಾರ್ಗದರ್ಶನ ಒದಗಿಸಬೇಕು ಎಂದರು.
ಕೈತೊಳೆಯುವ ವಿಧಾನ ಮೊದಲಾದ ಸ್ವಚ್ಛತೆಯ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಆರೋಗ್ಯ ಜಾಗೃತಿ ಕುರಿತು ಕಿರುಹೊತ್ತಿಗೆ, ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅಂಗನವಾಡಿಗಳಿಗೆ ವಿತರಿಸಲಾಯಿತು. ವಿದ್ಯಾಥಿಗಳಿಗೆ ವಿವಿಧ ಸ್ಫರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾಣಗಳನ್ನು ವಿತರಿಸಲಾಯಿತು.
ಜಂಗಮಕೋಟೆ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಅಂಬಿಕಾ, ವೈದ್ಯೆ ಮೇಘಶ್ರೀ, ಲ್ಯಾಬ್ ಟೆಕ್ನೀಶಿಯನ್ ಉಮಾ ಅವರಿಗೆ ಕೊರೋನಾ ವಾರಿಯರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯಶಿಕ್ಷಕಿ ಲಕ್ಷ್ಮಿ, ಶಿಕ್ಷಕ ಮಂಜುನಾಥ್, ಶಿಕ್ಷಕಿ ಬಿಂದು, ರೂಪಾ, ವಿಶಾಲಾಕ್ಷಿ, ಆರೋಗ್ಯ ಕಿರಿಯ ಶುಶ್ರೂಷಕಿ ಎನ್.ಆಶಾ, ಸ್ವಯಂಸೇವಕ ಮನೋಜ್ ಹಾಜರಿದ್ದರು.