ಶಿಡ್ಲಘಟ್ಟ ತಾಲ್ಲೂಕಿನ ಕೋವಿಡ್ ಮೃತರು ಯಾವುದೇ ಜಾತಿ, ಧರ್ಮ, ಮತದವರಾಗಿರಲಿ ಅವರವರ ಆಚಾರ ವಿಚಾರಕ್ಕೆ ಅನುಗುಣವಾಗಿ ಅತ್ಯಂತ ಗೌರವಯುತವಾಗಿ ನಮ್ಮ ಕಮಿಟಿ ವತಿಯಿಂದ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದು ಖಬರಸ್ತಾನ್ ಕಮಿಟಿ ಅಧ್ಯಕ್ಷ ಶಂಶೀರ್ ತಿಳಿಸಿದರು.
ನಗರದಲ್ಲಿ ಸೋಮವಾರ ಈದ್ಗಾಮೈದಾನದ ಬಳಿ ಖಬರಸ್ತಾನ್ ಕಮಿಟಿ ಸದಸ್ಯರೊಂದಿಗೆ ಚರ್ಚಿಸಿದ ನಂತರ ಅವರು ಮಾತನಾಡಿದರು.
ಕೊರೊನಾ ಬಂದು ನಿಧನರಾದವರ ಅಂತ್ಯಸಂಸ್ಕಾರಕ್ಕೆ ಎಲ್ಲೆಡೆ ಬಹಳ ತೊಂದರೆಯಾಗುತ್ತಿದೆ. ಬಂಧುಗಳೇ ನೆರವಿಗೆ ಬರುತ್ತಿಲ್ಲ. ಈ ಕಾರಣದಿಂದ ಶಿಡ್ಲಘಟ್ಟ ಖಬರಸ್ತಾನ್ ಕಮಿಟಿ ವತಿಯಿಂದ ಕೋವಿಡ್ ನಿಂದ ಮೃತರಾದವರಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ. ನಮ್ಮ ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆಯಿದೆ. ಏನೇ ತೊಂದರೆಯಾದರೂ ಬೆಂಗಳೂರಿಗೆ ಹೋಗಬೇಕು, ಹೆಣವಾಗಿ ವಾಪಸ್ ಬರಬೇಕು. ಈ ಬಗ್ಗೆ ಶಾಸಕರು ಮತ್ತು ಉಸ್ತುವಾರಿ ಸಚಿವರು ಗಮನ ಹರಿಸಬೇಕು. ಅವರು ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಬೇಕು. ಆಗ ಇಲ್ಲಿನ ಸಮಸ್ಯೆ ಅವರಿಗೆ ತಿಳಿಯುತ್ತದೆ ಮತ್ತು 24 ಗಂಟೆ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಗೆ ಮಾನಸಿಕ ಸ್ಥೈರ್ಯ ಮೂಡುತ್ತದೆ ಎಂದರು.
ಕೋವಿಡ್ ನಿಂದ ಮೃತಪಟ್ಟವರ ಸಂಬಂಧಿಕರು 8050600754; 9164445066; 9880231005 ಮೊಬೈಲ್ ನಂಬರುಗಳಿಗೆ ಕರೆ ಮಾಡುವಂತೆ ಅವರು ವಿನಂತಿಸಿದರು.
ಖಬರಸ್ತಾನ್ ಕಮಿಟಿ ಕಾರ್ಯದರ್ಶಿ ಮೌಲಾ, ಮುನಿಕೃಷ್ಣಪ್ಪ, ಹುಸೇನ್ ಶರೀಫ್, ಅಮೀರ್ ಖಾನ್, ನದ್ದು, ಅಫ್ರೋಜ್ ಅಹಮದ್, ಗೌಸ್ ಖಾನ್, ಸೈಯದ್ ಮತೀನ್, ದಾದು, ಸುಲೇಮಾನ್, ದಾದಾಪೀರ್, ನದೀಪ್ ಪಾಷ, ಆಸೀಫ್, ಇರ್ಫಾನ್ ಹಾಜರಿದ್ದರು.