Sidlaghatta : ನಗರೋತ್ಥಾನ ಹಂತ–4ರ ಅನುದಾನದಲ್ಲಿ ಶಿಡ್ಲಘಟ್ಟ ನಗರದ ಚಿಂತಾಮಣಿ ರಸ್ತೆಯ ಟೋಲ್‌ಗೇಟ್ ಬಳಿಯ ರಾಜಕಾಲುವೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಮಂಗಳವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.
ರಾಜಕಾಲುವೆಗೆ ಸಿಮೆಂಟ್ ನೆಲಹಾಸು ಹಾಗೂ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಜೊತೆಗೆ ಸಮಯಕ್ಕೆ ಮುಗಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಡಿಸಿ ಸೂಚನೆ ನೀಡಿದರು.
ಈ ವೇಳೆ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಯವರ ಗಮನಕ್ಕೆ ಹಲವು ಸಮಸ್ಯೆಗಳನ್ನು ತಂದರು. ರಾಜಕಾಲುವೆಯ ಒಂದು ಬದಿಯಲ್ಲಿ ಸುಮಾರು ಎಂಟು ಮನೆಗಳಿದ್ದು, ಹಳೆಯ ಮೋರಿ ತೆಗೆದುಹಾಕಲ್ಪಟ್ಟಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಅವರು ಅಹವಾಲು ನೀಡಿದರು.
“ನಾವು ಕಾಲುವೆ ಮೇಲೆ ನಿರ್ಮಿಸಿದ್ದ ಮೋರಿಯ ಮೂಲಕವೇ ಓಡಾಡುತ್ತಿದ್ದೆವು. ಈಗ ಅದು ತೆರವುಗೊಳಿಸಲಾಗಿದ್ದು, ಹೊಸದಾಗಿ ಮೋರಿ ನಿರ್ಮಿಸಲು ನಗರಸಭೆ ಅಧಿಕಾರಿಗಳು ಅನುಮತಿ ಇಲ್ಲವೆಂದಿದ್ದಾರೆ. ಹೀಗಾಗಿ ನಮ್ಮ ಮನೆಗಳಿಗೆ ಹೋಗಲು ದಾರಿಯೇ ಉಳಿದಿಲ್ಲ,” ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು, “ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ನಿಮ್ಮ ಅಹವಾಲು ಆಲಿಸಿದ್ದೇನೆ. ಸ್ಥಳಪರಿಸ್ಥಿತಿಯನ್ನು ಪರಿಶೀಲಿಸಿ, ತಾಂತ್ರಿಕ ಸಾಧ್ಯತೆಗಳ ಅನ್ವಯ ಅನುಕೂಲಕರ ಕ್ರಮ ಕೈಗೊಳ್ಳಲು ಪೌರಾಯುಕ್ತರು ಹಾಗೂ ಇಂಜಿನಿಯರ್‌ಗಳಿಗೆ ಸೂಚಿಸುತ್ತೇನೆ,” ಎಂದು ಭರವಸೆ ನೀಡಿದರು.
ಈ ವೇಳೆ ಪೌರಾಯುಕ್ತೆ ಜಿ. ಅಮೃತ ಮತ್ತು ಜೆಇ ಚಕ್ರಪಾಣಿ ಸೇರಿದಂತೆ ನಗರಸಭೆಯ ಅಧಿಕಾರಿಗಳು ಹಾಜರಿದ್ದರು.







