
Devaramallur, Sidlaghatta : ನಾವು ಪ್ರತಿ ನಿತ್ಯದ ಕೆಲಸ ಕಾರ್ಯಗಳ ನಡುವೆ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರ, ಪ್ರಕೃತಿಯೊಂದಿಗೆ ಒಟನಾಟವಿಟ್ಟುಕೊಂಡು ಬದುಕಬೇಕು. ಸಮಾಜಮುಖಿ ಬದುಕು ನಮ್ಮದಾಗಬೇಕೆಂದು ಬಿಜೆಪಿ ಗ್ರಾಮೀಣ ಅಧ್ಯಕ್ಷ ಸೀಕಲ್ ಆನಂದಗೌಡ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶಿಡ್ಲಘಟ್ಟದ ವಿವೇಕ ಜಾಗೃತ ದಳ ಹಾಗೂ ಉಡುಪಿಯ ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್ ನ ಆಶ್ರಯದಲ್ಲಿ ಗ್ರಾಮದ ಶ್ರೀಆತ್ಮ ರಾಮ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ- ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಭೂಮಿಯ ಮೇಲೆ ಜೀವಿಸಿರುವ ಎಲ್ಲ ಜೀವಿಗಳಲ್ಲೂ ಮನುಷ್ಯ ಜೀವಿಯ ನಮ್ಮ ಜನ್ಮ ಬಹಳ ಪವಿತ್ರ ಮತ್ತು ಸಾರ್ಥಕವಾದದ್ದು. ಅಪರೂಪಕ್ಕೆ ನಮಗೆ ಮನುಷ್ಯ ಜನ್ಮ ಸಿಗಲಿದ್ದು ಈ ಮನುಷ್ಯ ಜನ್ಮವನ್ನು ನಾವು ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಬದುಕು ಸಾಗಬೇಕೆಂದರು.
ಪೂಜೆ ಪುನಸ್ಕಾರದಂತ ಧಾರ್ಮಿಕ ಕಾರ್ಯಗಳು, ಸತ್ಸಂಗ, ದಾರ್ಶನಿಕರ ಆಶೀರ್ವಚನಗಳಂತ ಕಾರ್ಯಗಳಲ್ಲಿ ಭಾಗವಹಿಸಿ ನಮ್ಮ ಧಾರ್ಮಿಕ ಚಿಂತನೆಗಳು, ಹಿತವಚನಗಳು, ಸನಾತನ ಧರ್ಮದ ಬಗ್ಗೆ ತಿಳಿದುಕೊಂಡು ನಮ್ಮ ಬದುಕನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕಿದೆ ಎಂದರು.
ಸಾಲಿಗ್ರಾಮ ಡಿವೈನ್ ಪಾರ್ಕ್ ನ ಆರ್ತ ಸೇವಕ ಡಿ.ಎಸ್.ಯಶ್ವಂತ್ ವಿಶೇಷ ಉಪನ್ಯಾಸ ನೀಡಿ, ನಮ್ಮ ಧಾರ್ಮಿಕ ಚಿಂತನೆಗಳು, ಆಚಾರ ವಿಚಾರಗಳನ್ನು, ಸಂಪ್ರದಾಯಗಳನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಮತ್ತು ಅವರು ಆಚರಿಸುವ ಕೆಲಸ ಆಗಬೇಕು.
ಒಂದು ಭಾಷೆ ಉಳಿಯಬೇಕೆಂದರೆ ಆ ಭಾಷೆಯನ್ನು ಮಾತನಾಡುವವರು ಇರಬೇಕು. ಹಾಗೆಯೆ ಒಂದು ಧರ್ಮ ಉಳಿಯಬೇಕೆಂದರೆ ಧರ್ಮವನ್ನು ಹಾಗೂ ಧರ್ಮದ ಕಟ್ಟುಪಾಡು, ಆಚಾರಗಳನ್ನು ಸಂಪ್ರದಾಯಗಳನ್ನು ಪಾಲಿಸುವ ತನಕ ಧರ್ಮ ಇರುತ್ತದೆ ಎಂದರು.
ಶ್ರೀ ಆತ್ಮರಾಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಡಿವೈನ್ ಪಾರ್ಕ್ ನ ಪ್ರಭಾಕರ್, ರಾಮಕಷ್ಣಪ್ಪ, ವಿವೇಕ ಜಾಗೃತ ಬಳಗದ ಅಧ್ಯಕ್ಷ ಆನಂದ್, ಶಿವಣ್ಣ, ರಾಮಕೃಷ್ಣಪ್ಪ, ಮಧು, ಗ್ರಾಮದ ಮುಖಂಡರಾದ ವೆಂಕೋಬರಾವ್, ಬಚ್ಚಪ್ಪ, ಎಚ್.ವಿ.ಅಕ್ಕಲಪ್ಪ, ಬಾಲಕೃಷ್ಣ, ಆನಂದ್, ವೆಂಕಟಸ್ವಾಮಿ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.