Sidlaghatta, Chikkaballapur : ಪದವಿ ಶಿಕ್ಷಣವನ್ನು ಪೂರೈಸಿದ ವಿದ್ಯಾರ್ಥಿಯು ಸರ್ಕಾರಿ ಉದ್ಯೋಗ ಸಿಗದಿದ್ದರೂ ಬದುಕನ್ನು ಕಟ್ಟಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸ, ಕೌಶಲತೆ, ಜ್ಞಾನ ಹೊಂದುವ ಶಿಕ್ಷಣ ಲಭಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ಬಿಟ್ಟು ಪುಸ್ತಕ ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ “ಆರೋಹಣ – ವಿಜ್ಞಾನ ಮತ್ತು ಕುತೂಹಲದೊಂದಿಗೆ ಅಭ್ಯುದಯ” ಎಂಬ ಮೂರು ದಿನಗಳ ಕಾಲ ನಡೆಯಲಿರುವ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವೈಜ್ಞಾನಿಕ ಮನೋಭಾವವನ್ನು, ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಮನಸ್ಸು ಶುದ್ಧ ಬೆಣ್ಣೆಯಂತಹದ್ದು. ಜೇಡಿ ಮಣ್ಣನ್ನು ಸುಂದರ ಆಕಾರವಾಗಿ ರೂಪಿಸುವಂತೆ, ಶಿಕ್ಷಕರು ಉತ್ತಮ ವಿಚಾರ, ಸ್ವಯಂ ಅಭಿವ್ಯಕ್ತಿ, ಆಲೋಚನಾ ಕ್ರಮಗಳು, ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕು ಎಂದರು.
ಸಮಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಮಕ್ಕಳ ಮನಸ್ಸು ವಿಕಸಿತವಾಗಬೇಕು. ಪಠ್ಯದ ಜೊತೆಗೆ ವಿಜ್ಞಾನ ವಸ್ತುಪ್ರದರ್ಶನ, ಆಟೋಟಗಳು, ಕಲೆ ಮುಂತಾದವುಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳ ಮನಸ್ಸು ಮತ್ತು ಪ್ರತಿಭೆ ಅರಳುತ್ತದೆ. ಜೊತೆಯಲ್ಲಿ ಆ ಮಕ್ಕಳು ಮುಂದೆ ಆತ್ಮಸ್ಥೈರ್ಯದಿಂದ ಬದುಕನ್ನು ಕಟ್ಟಿಕೊಳ್ಳಲಿಕ್ಕೂ ಸಾಧ್ಯ ಎಂದು ಹೇಳಿದರು.
ವಿಜ್ಞಾನ ಮತ್ತುತಂತ್ರಜ್ಞಾನ ಅಕಾಡೆಮಿ ಸದಸ್ಯ ಹುಲಿಕಲ್ ನಟರಾಜ್ ಮಾತನಾಡಿ, ವಿಜ್ಞಾನ ಎಂಬುದು ಜ್ಞಾನವನ್ನು ಕೊಡುವ ಪ್ರಯೋಗ ಶಾಲೆ. ಈ ಶಾಲೆಯಲ್ಲಿ ಕಲಿತವರು ಎಂದಿಗೂ ಅಜ್ಞಾನದ ಹಿಂದೆಯಾಗಲೀ, ಮೌಢ್ಯತೆಯ ಹಿಂದೆಯಾಗಲೀ ಬಿದ್ದು ಸಮಾಜವನ್ನುಅಧಃಪತನಕ್ಕೆ ತಳ್ಳುವ ಕೆಲಸ ಮಾಡುವುದಿಲ್ಲ ಎಂದರು.
ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಶಿಕ್ಷಣ ಅಂಕಗಳಿಗಿಂತ ಮೌಲ್ಯಗಳಿಂದ ನಿರ್ಧಾರವಾಗಬೇಕು. ವಿದ್ಯಾರ್ಥಿಗಳ ಬದುಕಿಗೆ ಜೀವನ ಕೌಶಲ್ಯವು ಅತೀ ಮುಖ್ಯವಾದುದು. ತರಗತಿಗಳಲ್ಲಿ ಕಲಿಯುವುದಕ್ಕಿಂತ ಪ್ರಾಯೋಗಿಕವಾಗಿ ವಸ್ತು ಪ್ರದರ್ಶನಗಳಲ್ಲಿ ಮಾದರಿಗಳನ್ನು ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಭಾಗಗಳ 150 ಕ್ಕೂ ಹೆಚ್ಚು ಮಾದರಿಗಳು, ಮೊಬೈಲ್ ಪ್ಲಾನೆಟೋರಿಯಂ, ವಿದ್ಯಾರ್ಥಿಗಳ ಕುಂಚದಿಂದ ಅರಳಿರುವ ಕಲಾಕೃತಿಗಳು, ಆಯುರ್ ಹಬ್ ಎಂಬ ಆರೋಗ್ಯವಂತ ಜೀವನಕ್ಕೆ ಬಳಸಬಹುದಾದ ಸೊಪ್ಪು, ತರಕಾರಿ, ಹಣ್ಣುಗಳು ಮತ್ತು ಅವುಗಳ ಔಷಧೀಯ ಗುಣಗಳ ಪ್ರದರ್ಶನ, ಅಂಚೆ ಚೀಟಿ ಸಂಗ್ರಹಕಾರ ವಿನೋದ್ ಪುಠಾಣಿಕರ್ ಅವರು ಭಾರತೀಯ ಪ್ರಾಚೀನ ನಾಣ್ಯಗಳು, ಭಾರತ ಗಣರಾಜ್ಯದ ನಾಣ್ಯಗಳು, “ಅಂಚೆ ಚೀಟಿಯಲ್ಲಿ ಕರ್ನಾಟಕ ದರ್ಶನ” ಎಂಬ ಅಂಚೆ ಇಲಾಖೆ ಕರ್ನಾಟಕದ ಕುರಿತು ಬಿಡುಗಡೆ ಮಾಡಿರುವ ಅಂಚೆ ಚೀಟಿಗಳು, ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶೇಷ ವ್ಯಕ್ತಿಗಳ ಪರಿಚಯವುಳ್ಳವರ ವ್ಯಕ್ತಿ ಚಿತ್ರಗಳನ್ನು ಪ್ರದರ್ಶಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ನಂದೀಶ್ ಅವರಿಂದ ಪುರಾತನ ನಾಣ್ಯಗಳ ಮತ್ತು ವಿವಿಧ ದೇಶಗಳ ನೋಟುಗಳ ಮತ್ತು ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಡಾಲ್ಫಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಪ್ರಾಂಶುಪಾಲರುಗಳಾದ ಡಾ. ಸುದರ್ಶನ್, ಡಾ. ಶ್ರೀನಿವಾಸಮೂರ್ತಿ.ಎನ್, ಆರಿಫ್ ಅಹಮದ್, ಮುನಿಕೃಷ್ಣಪ್ಪ, ಮುನಿಶಾಮಪ್ಪ ಸೇರಿದಂತೆ ಎಲ್ಲಾ ಶಿಕ್ಷಕರುಗಳು, ಪೋಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
For Daily Updates WhatsApp ‘HI’ to 7406303366









