Sidlaghatta : ಎಲ್ಲ ವಿದ್ಯಾರ್ಥಿಗಳಲ್ಲೂ ನಾಯಕತ್ವ ಗುಣ, ಸಹಾಯ ಹಸ್ತ ನೀಡುವ ಗುಣಗಳು ಇರುತ್ತವೆ. ಆದರೆ ನಾವು ಬೆಳೆಯುವ ವಾತಾವರಣ ಮತ್ತು ನಮಗೆ ಸಿಗುವ ಮಾರ್ಗದರ್ಶನ, ನಾವು ಚಿಂತಿಸುವ ಆಧಾರದಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಗ್ರಾಮಾಂತರ ಠಾಣೆಯ ಎಸ್.ಐ ಸತೀಶ್ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾಯಕತ್ವದ ಪದವಿ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹುಟ್ಟಿನಿಂದಲೆ ಎಲ್ಲರು ಕೂಡ ಸಮರ್ಥರಾಗಿರುತ್ತಾರೆ, ಯಾರೊಬ್ಬರು ಕೂಡ ಅಸಮರ್ಥರಾಗಿರುವುದಿಲ್ಲ. ನಾವು ಚಿಂತನೆ ಮಾಡುವುದರ ಮೇಲೆ ಮತ್ತು ಅವಕಾಶಗಳನ್ನು ಬಳಸಿಕೊಳ್ಳುವುದರ ಮೇಲೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಎಂದರು.
ಮುಖ್ಯವಾಗಿ ವಿದ್ಯಾರ್ಥಿಗಳು ಓದು ಬರಹದ ಮೇಲೆ ಗಮನವನ್ನು ಕೇಂದ್ರೀಕರಿಸುವ ಜತೆಗೆ ಸಮಯ ಪ್ರಜ್ಞೆ, ಶಿಸ್ತು, ಶ್ರದ್ದೆಯನ್ನು ಮೈಗೂಡಿಸಿಕೊಳ್ಳಬೇಕು. ಗುರುವಿನ ಮಾರ್ಗದರ್ಶನದೊಂದಿಗೆ ಗುರಿ ಮುಟ್ಟುವ ಕೆಲಸ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಉತ್ತಮ ಅಭ್ಯಾಸಗಳು ನಮ್ಮ ಗುರಿ ಮುಟ್ಟಲು ಅನುಕೂಲ ಮಾಡಿಕೊಡಲಿವೆ. ಹೆತ್ತವರು, ಅಕ್ಷರ ಕಲಿಸಿದ ಗುರುಗಳು, ಎಲ್ಲವನ್ನೂ ಕೊಟ್ಟ ಈ ಸಮಾಜದ ಋಣವನ್ನು ತೀರಿಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ. ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡರೆ ಅದೇ ನಾವು ನೀವು ಈ ಸಮಾಜಕ್ಕೆ ಕೊಡುವ ಕಾಣಿಕೆ ಎಂದರು.
ಪ್ರೌಢಶಾಲಾ ಮಕ್ಕಳಿಗೆ ಕದಂಬ, ರಾಷ್ಟ್ರಕೂಟ ಇನ್ನಿತರೆ ವಿದ್ಯಾರ್ಥಿ ತಂಡಗಳ ನಾಯಕತ್ವದ ಪದವಿ ಪ್ರಮಾಣ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಡಾಲ್ಫಿನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಕಾರ್ಯದರ್ಶಿ ವಿ.ಕೃಷ್ಣಪ್ಪ, ಪ್ರಿನ್ಸಿಪಲ್ ಮುನಿಕೃಷ್ಣಪ್ಪ, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.