Sidlaghatta : ಶಿಡ್ಲಘಟ್ಟ ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ 1 ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ “ಲಿಟ್ಲ್ ಮೈಂಡ್ ಬಿಗ್ ಐಡಿಯಾಸ್”-“ಅವಲೋಕನ” ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಂಯೋಜಕ ಯು.ವೈ.ಮಂಜುನಾಥ್, ಶಾಲೆಗಳಲ್ಲಿ ನಡೆಯುವ ಚಟುವಟಿಕೆಗಳು ಮಕ್ಕಳಲ್ಲಿನ ಆಸಕ್ತಿಯನ್ನು ಕೆರಳಿಸುವ, ಆಸಕ್ತಿಯನ್ನು ಹೆಚ್ಚಿಸುವಂತಿರಬೇಕು. ಮಕ್ಕಳಲ್ಲಿ ಕ್ರೀಯಾಶೀಲತೆ ಬೆಳೆಸುವುದೇ ಶಿಕ್ಷಣದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಂತ ಚಟುವಟಿಕೆಗಳು ಪ್ರಾಯೋಗಿಕವಾಗಿ ಅನುಭವವನ್ನು ನೀಡುತ್ತವೆ. ಇದು ಪಠ್ಯದ ಅಭ್ಯಾಸಕ್ಕಿಂತಲೂ ಹೆಚ್ಚು ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಶಾಲೆಗಳಲ್ಲಿ ಇಂತಹ ಚಟುವಟಿಕೆಗಳು ಕಾಲ ಕಾಲಕ್ಕೆ ನಡೆಯಬೇಕು ಎಂದು ಹೇಳಿದರು.
ದೇಶದ ಗಡಿ, ಭಾಷೆಯನ್ನು ಮೀರಿ ಇತರೆ ಎಲ್ಲ ದೇಶ, ಭಾಷಿಕ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕವಾಗಿ, ಉದ್ಯೋಗದ ವಿಚಾರದಲ್ಲಿ ಪೈ ಪೋಟಿ ನಡೆಸಿ ಗೆಲ್ಲಬೇಕಾದ, ಸ್ಪರ್ಧೆಯನ್ನು ಎದುರಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ. ಮಕ್ಕಳನ್ನು ಜಾಗತಿಕ ಪೈಪೋಟಿ ಎದುರಿಸುವ ನಿಟ್ಟಿನಲ್ಲಿ ತಯಾರು ಮಾಡಬೇಕಾದ ಅನಿವಾರ್ಯತೆ ಶಾಲಾ ಶಿಕ್ಷಕರದ್ದು ಮತ್ತು ಪೋಷಕರದ್ದೂ ಆಗಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿ ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದರು.
ವಿಜ್ಞಾನ, ಪರಿಸರ, ಆಹಾರ ಕ್ರಮ, ಯೋಗ ಮೊದಲಾದ ಅನೇಕ ವಿಷಯಗಳ ಬಗ್ಗೆ ವಸ್ತು ಪ್ರದರ್ಶನ ನಡೆಯಿತು. ಇತರೆ ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ವಸ್ತು ಪ್ರದರ್ಶನ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು.
ಡಾಲ್ಫಿನ್ ವಿದ್ಯಾ ಸಂಸ್ಥೆಯ ಎ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಆಡಳಿತಾಧಿಕಾರಿ ಚಂದನ, ಪ್ರಿನ್ಸಿಪಲ್ ಎಲ್.ಮುನಿಕೃಷ್ಣಪ್ಪ, ಡಾ.ಶ್ರೀನಿವಾಸಮೂರ್ತಿ, ಡಾ.ಸುದರ್ಶನ್, ಆರೀಫ್ ಅಹ್ಮದ್ ಹಾಜರಿದ್ದರು.








