ರೈತರ ಹಿತದೃಷ್ಠಿಯಿಂದ ಭೂ ಸುಧಾರಣೆ ಕಾಯಿದೆ ಹಾಗೂ ಎಪಿಎಂಸಿ ಸುಗ್ರೀವಾಜ್ಞೆಯನ್ನು ಸರ್ಕಾರ ಹಿಂಪಡೆಯಬೇಕು ಮತ್ತು ಅನ್ನದಾತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ) ಪದಾಧಿಕಾರಿಗಳು ತಹಶೀಲ್ದಾರ್ ಕೆ.ಅರುಂಧತಿ ಅವರ ಮುಖಾಂತರ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.
ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ ಮಾತನಾಡಿ, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದರೂ ಕೃಷಿಕರು ದೇಶವನ್ನು ಮುನ್ನಡೆಸುವಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಜನಾಭಿಪ್ರಾಯ, ಚರ್ಚೆಯಿಲ್ಲದೇ ಸರ್ಕಾರ 1961 ರ ಭೂ ಸುಧಾರಣೆ ಕಾಯಿದೆಯ 79 ಎ, ಬಿ, ಸಿ ಮತ್ತು 80 ನೇ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದು ಪಡಿಸಿ 63 ನೇ ಕಲಮಿಗೆ ತಿದ್ದುಪಡಿ ಮಾಡಿರುವುದು ರೈತವಿರೋಧಿ ಧೋರಣೆಯಾಗಿದೆ. ಇದರಿಂದ ರೈತರ ಭೂಮಿ ಕೈಗಾರಿಕೋಧ್ಯಮಿಗಳ, ಬಂಡವಾಳಶಾಹಿಗಳ ಪಾಲಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಬೀದಿಗೆ ಬೀಳುತ್ತಾರೆ. ಹಾಗಾಗಿ ರೈತ ವಿರೋಧಿ ಮಸೂದೆಯನ್ನು ಕೂಡಲೇ ಸರ್ಕಾರ ವಾಪಸ್ ಪಡೆಯಬೇಕು ಎಂದರು.
ಎಪಿಎಂಸಿ ಸುಗ್ರೀವಾಜ್ಞೆಯನ್ನು ಜನಾಭಿಪ್ರಾಯ ಪಡೆದು ವಿದಾನಸಭೆಯಲ್ಲಿ ಚರ್ಚೆಗೆ ಇಟ್ಟು ನಂತರ ಅನುಷ್ಟಾನ ಗೊಳಿಸಬೇಕು, ಅನಾಧಿ ಕಾಲದಿಂದಲೂ ರೇಷ್ಮೆ ಇಲಾಖೆ ಸ್ವತಂತ್ರ ಇಲಾಖೆಯಾಗಿದ್ದು ಇದೀಗ ಕೊರೋನಾ ಸಂದರ್ಭದಲ್ಲಿ ಇಲಾಖೆಯನ್ನು ಬೇರೆ ಇಲಾಖೆಯೊಂದಿಗೆ ವಿಲೀನ ಮಾಡುವುದನ್ನು ಕೈ ಬಿಡಬೇಕು, ರೇಷ್ಮೆ ಗೂಡು ಪ್ರತಿ ಕೆಜಿಗೆ 150 ರೂ, ಹಾಗು ಹಿಪ್ಪುನೇರಳೆ ಬೆಳೆಯುವ ಬೆಳೆಗಾರರಿಗೆ ಎಕರೆಗೆ ೨೫ ಸಾವಿರ ಸಹಾಯಧನ ನೀಡಬೇಕು. ಹೈನುಗಾರಿಕೆ ಮಾಡುವ ರೈರು ಉತ್ಪಾದಿಸುವ ಹಾಲಿಗೆ ಪ್ರತಿ ಲೀ ಗೆ 40 ರೂ ನಿಗಧಿ ಮಾಡಬೇಕು, ಕಂದಾಯ ಇಲಾಖೆಯಲ್ಲಿ ಈ ಹಿಂದೆ ದಾಖಲೆಗಳನ್ನು ಪಡೆಯಲು ಇದ್ದ ಕ್ರಮವನ್ನೇ ಮುಂದೆಯೂ ಅನುಸರಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕೆ.ಅರುಂಧತಿ ರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಭಕ್ತರಹಳ್ಳಿ ಪ್ರತೀಶ್, ಕೆ.ಅಂಬರೀಷ, ಬಿ.ಅಭಿಲಾಷ್, ಆರ್.ಹುಸೇನ್‌ಸಾಬ್, ಡಿ.ವಿ.ನಾರಾಯಣಸ್ವಾಮಿ, ಗುಂಡಪ್ಪ, ಕೆ.ಎನ್.ಮಂಜುನಾಥ, ಬಿ.ವಿ.ನಾರಾಯಣಸ್ವಾಮಿ, ಚೌಡಪ್ಪ, ಮುನಿಯಪ್ಪ ಹಾಜರಿದ್ದರು.







