ರಸಗೊಬ್ಬರ ಖರೀದಿಗೆ ಇನ್ನು ಸರತಿ ಸಾಲು ಬೇಡ: ಡಿ. 1ರಿಂದ ಆ್ಯಪ್‌ನಲ್ಲಿ ಬುಕ್ಕಿಂಗ್, ಕ್ಯೂಆರ್ ಕೋಡ್ ಸ್ಕ್ಯಾನ್

Tahsildar Gaganasindhu speaking at the fertilizer sales framework (FFS) training workshop for dealers and farmers in Sidlaghatta taluk

Sidlaghatta : ರಸಗೊಬ್ಬರ ಖರೀದಿಗೆ ಅಂಗಡಿಗಳ ಮುಂದೆ ಇನ್ನು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಡಿಸೆಂಬರ್ 1ರಿಂದ ಮೊಬೈಲ್ ಆ್ಯಪ್ ಆಧಾರಿತ ‘ಫ್ರೇಮ್ ವರ್ಕ್ ಫಾರ್ ಫರ್ಟಿಲೈಸರ್ ಸೇಲ್ಸ್’ (FFS – Framework for Fertilizer Sales) ವ್ಯವಸ್ಥೆ ಜಾರಿಯಾಗಲಿದೆ ಎಂದು ತಹಶೀಲ್ದಾರ್ ಎನ್. ಗಗನಸಿಂಧು ಹೇಳಿದರು.

ವರದನಾಯಕನಹಳ್ಳಿ ಬಳಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ನಡೆದ ರಸಗೊಬ್ಬರ ಮಾರಾಟಗಾರರು ಮತ್ತು ರೈತರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆ್ಯಪ್ ಮೂಲಕ ಗೊಬ್ಬರ ಪಡೆಯುವುದು ಹೇಗೆ?

ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ರೀತಿಯಲ್ಲೇ ರೈತರು ಮೊಬೈಲ್ ಆ್ಯಪ್‌ನಲ್ಲಿ ತಮಗೆ ಬೇಕಾದ ಗೊಬ್ಬರವನ್ನು ಮುಂಚಿತವಾಗಿ ಕಾಯ್ದಿರಿಸಬಹುದು. ಹತ್ತಿರದ ಅಂಗಡಿಗಳಲ್ಲಿ ಎಷ್ಟು ಗೊಬ್ಬರ ಲಭ್ಯವಿದೆ ಎಂಬುದನ್ನೂ ಆ್ಯಪ್‌ನಲ್ಲೇ ನೋಡಬಹುದು.

  • ಆ್ಯಪ್‌ನಲ್ಲಿ ಬೇಕಾದ ಗೊಬ್ಬರವನ್ನು ಬುಕ್ ಮಾಡಿ
  • ಬುಕ್ಕಿಂಗ್ ನಂತರ ಮೊಬೈಲ್‌ಗೆ ಕ್ಯೂಆರ್ ಕೋಡ್ ಬರುತ್ತದೆ
  • ನಿಗದಿತ ಅವಧಿಯೊಳಗೆ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿ ಗೊಬ್ಬರ ಪಡೆಯಿರಿ

ಎಫ್‌.ಐ.ಡಿ ಇಲ್ಲದವರು ಏನು ಮಾಡಬೇಕು?

ಪಹಣಿ (ಆರ್‌ಟಿಸಿ) ಇರುವ ರೈತರಿಗೆ ರೈತರ ಗುರುತಿನ ಸಂಖ್ಯೆ (ಎಫ್‌.ಐ.ಡಿ – FID) ಆಧಾರದಲ್ಲಿ ಗೊಬ್ಬರ ನೀಡಲಾಗುತ್ತದೆ. ಭೂ ದಾಖಲೆಗಳಿಲ್ಲದ ಬಗರ್ ಹುಕುಂ ಸಾಗುವಳಿದಾರರೂ ವಿನಾಯಿತಿ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಸ್ಮಾರ್ಟ್‌ಫೋನ್ ಇಲ್ಲದ ರೈತರು ಮೊಬೈಲ್ ಸಂಖ್ಯೆ ನೀಡಿದರೆ, ಮಾರಾಟಗಾರರೇ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಡುತ್ತಾರೆ.

ಸಹಾಯಕ ಕೃಷಿ ನಿರ್ದೇಶಕ ಪಿ. ರವಿ ಮಾತನಾಡಿ, ತಾಲ್ಲೂಕಿನಲ್ಲಿ ಶೇ 70ರಿಂದ 80ರಷ್ಟು ರೈತರು ಎಫ್‌.ಐ.ಡಿ ಮಾಡಿಸಿಕೊಂಡಿದ್ದಾರೆ ಎಂದರು. ಎಫ್‌.ಐ.ಡಿ ಇಲ್ಲದವರು ಆಧಾರ್, ಪಹಣಿ ಮತ್ತು ಬ್ಯಾಂಕ್ ಪಾಸ್‌ಬುಕ್ ಸಹಿತ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ಸೌಲಭ್ಯ ಮತ್ತು ಬ್ಯಾಂಕ್ ಸಾಲ ಪಡೆಯಲು ಎಫ್‌.ಐ.ಡಿ ಪ್ರಮುಖ ದಾಖಲೆಯಾಗಲಿದೆ ಎಂದು ತಿಳಿಸಿದರು.

ಮಾರಾಟಗಾರರಿಗೆ ಎಚ್ಚರಿಕೆ

ಯೂರಿಯಾ ಮತ್ತು ಡಿಎಪಿ ಖರೀದಿಸುವ ರೈತರಿಗೆ ಬೇರೆ ಕೃಷಿ ಪರಿಕರಗಳನ್ನು ಕೊಳ್ಳುವಂತೆ ಒತ್ತಾಯಿಸಬಾರದು ಎಂದು ತಹಶೀಲ್ದಾರ್ ಸೂಚಿಸಿದರು. ಹೆಚ್ಚಿನ ದರ ಪಡೆದರೆ ಅಥವಾ ದಾಸ್ತಾನು ಇದ್ದರೂ ಗೊಬ್ಬರ ನೀಡದಿದ್ದರೆ ರೈತರು ಆ್ಯಪ್ ಮೂಲಕವೇ ದೂರು ಸಲ್ಲಿಸಬಹುದು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ, ತಾಂತ್ರಿಕ ಅಧಿಕಾರಿ ಶ್ರೀನಿವಾಸ್, ರೈತ ಮುಖಂಡರಾದ ತಾದೂರು ಮಂಜುನಾಥ್, ಶೆಟ್ಟಿಹಳ್ಳಿ ರವಿ ಪ್ರಕಾಶ್ ಹಾಗೂ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಸಂಬಂಧಿತ ಸುದ್ದಿ: ರಸಗೊಬ್ಬರ ಮಾರಾಟ ಮೊಬೈಲ್ ಆ್ಯಪ್ ತರಬೇತಿಯ ಮುನ್ಸೂಚನೆ ಓದಿ; ಎಫ್‌.ಐ.ಡಿ ಕಡ್ಡಾಯ: ಯಾವ ದಾಖಲೆ ತರಬೇಕು ಎಂಬ ವರದಿಯನ್ನೂ ನೋಡಿ; ರಸಗೊಬ್ಬರ ಕುರಿತ ಎಲ್ಲ ಸುದ್ದಿ.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ