
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಹತ್ತು ಮಂದಿ ಹೋಮ್ ಗಾರ್ಡ್ ಗಳಿಗೆ ಆಸ್ಪತ್ರೆಗೆ ಬರುವವರು ಹಾಗೂ ರೋಗಿಗಳ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ಮಾಡಿದ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ವ್ಯವಸ್ಥೆಯ ನಿರ್ವಹಣೆಗೆ ಹೋಮ್ ಗಾರ್ಡ್ ಗಳನ್ನು ನಿಯೋಜಿಸಲಾಗುತ್ತಿದೆ. ಕೋವಿಡ್ ವಾರ್ಡುಗಳಲ್ಲಿ ಅನಗತ್ಯವಾಗಿ ಯಾರೂ ಓಡಾಡಬಾರದು. ರೋಗಿಗಳಾಗಲೀ, ರೋಗಿಗಳ ಜೊತೆಯಿರುವವರಾಗಲೀ ಕೋವಿಡ್ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು.
ಮೂರು ಪಾಳಿಗಳಲ್ಲಿ ಹೋಮ್ ಗಾರ್ಡ್ ಗಳನ್ನು ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಬೆಳಗ್ಗೆ ಒಂಬತ್ತರಿಂದ ಮಧ್ಯಾಹ್ನ ಮೂರರವರೆಗೂ ನಂತರ ಮಧ್ಯಾಹ್ನ ಮೂರರಿಂದ ರಾತ್ರಿ ಒಂಬತ್ತರವರೆಗೂ, ಆನಂತರ ರಾತ್ರಿ ಒಂಬತ್ತರಿಂದ ಬೆಳಗ್ಗೆ ಒಂಬತ್ತರವರೆಗೂ ಕಾರ್ಯ ನಿರ್ವಹಿಸುವರು ಎಂದು ಅವರು ತಿಳಿಸಿದರು.