ಶಿಡ್ಲಘಟ್ಟ ತಾಲ್ಲೂಕಿನ ಕಂಬಾಲಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಚೈಲ್ಡ್ ರೈಟ್ಸ್ ಟ್ರಸ್ಟ್, ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್, ಟೆರೆಸ್ಡೇಸ್ ನೆದರ್ಲ್ಯಾಂಡ್ಸ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿನಿಧಿ ಮೋನಿಕಾ ಮಾತನಾಡಿದರು.
ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಮಾನತೆ ಸಿಗಬೇಕಾದಲ್ಲಿ ಹೆಣ್ಣು ಮಕ್ಕಳ ಬಾಲ್ಯವಿವಾಹ, ಸಾಗಾಣಿಕೆ ಮತ್ತು ಲೈಂಗಿಕ ಶೋಷಣೆ ಮುಂತಾದ ದೌರ್ಜನ್ಯಗಳು ನಿಲ್ಲಲೇಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಹೆಣ್ಣು ಮಕ್ಕಳಿಗೆ ಸಮಾನ ಶಿಕ್ಷಣ, ಜೀವನ ಕೌಶಲ್ಯಗಳು ಸಿಗಬೇಕು ಮತ್ತು ಹೆಣ್ಣು ಮಕ್ಕಳ ವಿಚಾರಗಳ ಬಗ್ಗೆ ಗಂಡು ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನ ಸಮುದಾಯ ಮತ್ತು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು.
ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಬಾಲ್ಯವಿವಾಹದಿಂದ ಆಗುವ ದೈಹಿಕ ಮತ್ತು ಮಾನಸಿಕ ತೊಂದರೆ ಕುರಿತು ಹಾಗೂ ಆಶಾ ಕಾರ್ಯಕರ್ತೆ ಶೈಲಾ ಹೆಣ್ಣು ಮಕ್ಕಳ ಮುಟ್ಟು ಮತ್ತು ಲೈಂಗಿಕ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು.
ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು ಸಂಸ್ಥೆಯ ವೆಂಕಟೇಶ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯ ಹಿನ್ನೆಲೆ ಹಾಗೂ ಪ್ರಸಕ್ತವಾಗಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಶೋಷಣಾ ಪದ್ದತಿಗಳಾದ ಭ್ರೂಣ ಹತ್ಯೆಗಳು, ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಕೆ ಮುಂತಾದ ಅವಾಂತರಗಳು ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಯಾವ ರೀತಿ ದೌರ್ಜನ್ಯಗಳು ಹೆಚ್ಚಾಗಳು ಸಹಕಾರಿಯಾಗಿದೆ ಎಂದು ತಿಳಿಸಿ ಇಂತಹ ಸನ್ನಿವೇಶದಲ್ಲಿ ಸಮುದಾಯ ಮತ್ತು ಸರ್ಕಾರಗಳು ಹೆಣ್ಣು ಮಕ್ಕಳ ಉಳಿವಿಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೆಣ್ಣು ಮಕ್ಕಳ ದಿನಾಚರಣೆ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕೆಂದು ಹೇಳಿದರು.
ಗ್ರಾಮದ ಹೆಣ್ಣು ಮಕ್ಕಳು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಶಿಡ್ಲಘಟ್ಟ ಸಿಬ್ಬಂದಿ ಸತೀಶ್, ರಾಮಕೃಷ್ಣ, ಸುಜಾತ ಹಾಜರಿದ್ದರು.