Jangamakote, Sidlaghatta : ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ನಡೆಸಿದ ನಿರಂತರ ಒಂದೂವರೆ ವರ್ಷದ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಭೂಸ್ವಾಧೀನಕ್ಕಾಗಿ ಗುರುತಿಸಲಾಗಿದ್ದ ಒಟ್ಟು 2823 ಎಕರೆ ಜಮೀನಿನ ಪೈಕಿ, ರೈತರ ಬದುಕಿಗೆ ಆಧಾರವಾಗಿದ್ದ 471 ಎಕರೆ ಫಲವತ್ತಾದ ನೀರಾವರಿ ಪ್ರದೇಶವನ್ನು ಕೆಐಎಡಿಬಿ ಕೈಬಿಟ್ಟಿರುವುದನ್ನು ಹೋರಾಟ ಸಮಿತಿ ಸ್ವಾಗತಿಸಿದೆ.
ಜಂಗಮಕೋಟೆಯ ಶ್ರೀ ಪೂಜಮ್ಮ ದೇವಾಲಯದ ಆವರಣದಲ್ಲಿ ಗುರುವಾರ ನಡೆದ ರೈತಪರ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ರಿಯಲ್ ಎಸ್ಟೇಟ್ ದಂಧೆಗೆ ಬ್ರೇಕ್ ಹಾಕಲು ಆಗ್ರಹ: ಸಭೆಯ ಬಳಿಕ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ರಾಮಾಂಜನೇಯ, “ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಂಡಿರುವುದು ನಮಗೆ ಖುಷಿ ತಂದಿದೆ. ಆದರೆ, ಉಳಿದ ಜಮೀನಿನ ವಿಷಯದಲ್ಲಿ ಸರ್ಕಾರ ಈಗ ತ್ವರಿತವಾಗಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಜಂಗಮಕೋಟೆ ಭಾಗದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಸಕ್ರಿಯವಾಗಿದ್ದು, ಬಡ ರೈತರಿಗೆ ಅಲ್ಪ ಹಣ ನೀಡಿ ಜಿಪಿಎ (GPA) ಮಾಡಿಸಿಕೊಂಡು ಮೋಸ ಮಾಡುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರ ಶೀಘ್ರವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ಈ ಭಾಗದ ಯುವಕರಿಗೆ ಉದ್ಯೋಗ ನೀಡಬೇಕು,” ಎಂದು ಒತ್ತಾಯಿಸಿದರು.
ತ್ವರಿತ ಕೈಗಾರಿಕೀಕರಣಕ್ಕೆ ಬೇಡಿಕೆ:
ಕೃಷಿ ಭೂಮಿಯನ್ನು ಹೊರತುಪಡಿಸಿ ಉಳಿದ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಂಡರೆ ಸ್ಥಳೀಯವಾಗಿ ಆರ್ಥಿಕ ಪ್ರಗತಿ ಕಾಣಬಹುದು ಎಂಬುದು ಸಮಿತಿಯ ಆಶಯವಾಗಿದೆ. ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ದಲಿತ ಸಂಘರ್ಷ ಸಮಿತಿಯ ರಾಮಾಂಜನೇಯ ಸೇರಿದಂತೆ ಹಲವು ಗ್ರಾಮಗಳ ರೈತ ಮುಖಂಡರು ಭಾಗವಹಿಸಿದ್ದರು.








