Sidlaghatta : ಸಂವಿಧಾನದಡಿಯಲ್ಲಿ ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಹೋರಾಟ ಮಾಡಿ ನಮ್ಮದೇನೂ ಅಭ್ಯಂತರವಿಲ್ಲ, ಆದರೆ ರೈತರ ಸೋಗಿನಲ್ಲಿ ಹಸಿರು ಶಾಲು ಹಾಕಿಕೊಂಡು ಜನಪ್ರತಿನಿಧಿಗಳ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಎಚ್ಚರಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಶಾಸಕರ ಸ್ವಗೃಹದಲ್ಲಿ ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತರ ಪರ ಹೋರಾಟ ಸಮಿತಿಯ ಪದಾಧಿಕಾರಿಗಳು 13 ಹಳ್ಳಿಗಳ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಯಿಂದ ನಿಗದಿ ಪಡಿಸಿರುವ ದರ ಕಡಿಮೆಯಾಗಿದ್ದು ಹೆಚ್ಚಿನ ದರ ಕೊಡಿಸಬೇಕೆಂದು ಒತ್ತಾಯಿಸಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದರು.
ಕಳೆದ ಒಂದೂವರೆ ತಿಂಗಳಿಂದ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ ಕೆಐಎಡಿಬಿ ಯಿಂದ ಭೂ ಸ್ವಾದೀನ ಪ್ರಕ್ರಿಯೆಯ ಪರವಾಗಿ ಕೆಲವರು, ವಿರೋಧವಾಗಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟ ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ಹಾಗಂತ ಹೋರಾಟದ ಹೆಸರಲ್ಲಿ ಜನಪ್ರತಿನಿಧಿಗಳನ್ನು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ನಾನೂ ಒಬ್ಬ ರೈತ ಕುಟುಂಬದವನಾಗಿದ್ದು ನಿಜವಾದ ರೈತನ ನೋವೇನೂ ಎನ್ನುವ ಅರಿವಿದೆ. ರೈತನ ಸೋಗಿನಲ್ಲಿ ಹಸಿರುಶಾಲು ಹಾಕಿಕೊಂಡು ಕುಳಿತವರಿಂದ ಕಲಿಯುವ ಅಗತ್ಯವಿಲ್ಲ. ಎಲ್ಲರೂ ಉಪ್ಪು ಖಾರ ತಿನ್ನುವವರೆ, ನಮಗೂ ಕೋಪ ಬರುತ್ತದೆ, ಆದರೆ ನಾನು ಯಾವುದೇ ದ್ವೇಷ ರಾಜಕಾರಣ ಮಾಡಲ್ಲ, ನಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಘರ್ಷಣೆಗಳಾಗಬಾರದು ಎನ್ನುವುದು ನಮ್ಮ ಉದ್ದೇಶ ಆಗಿದೆ ಎಂದರು.
ಕ್ಷೇತ್ರದ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರ ಜಮೀನುಗಳಿಗೆ ಕೆಐಎಡಿಬಿ ವತಿಯಿಂದ ನಿಗದಿಪಡಿಸಿರುವ ದರ ಕಡಿಮೆ ಆಗಿದೆ ಎಂದು ನೀಡಿರುವ ಮನವಿಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಕೈಗಾರಿಕೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮತ್ತೊಂದು ದಿನಾಂಕ ನಿಗಧಿಪಡಿಸಿ ರೈತರ ಸಮ್ಮುಖದಲ್ಲಿಯೇ ಮುಖಾ ಮುಖಿ ಚರ್ಚೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ಶ್ರಮಿಸುವುದರ ಜೊತೆಗೆ ಕೈಗಾರಿಕೆಗಳಿಗಾಗಿ ಭೂಮಿ ನೀಡುತ್ತಿರುವ ರೈತರ ಕುಟುಂಬದ ಒಬ್ಬರಿಗೆ ಖಾಯಂ ಕೆಲಸ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬೆಳ್ಳೂಟಿ ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ನಲ್ಲೇನಹಳ್ಳಿ ಸುಬ್ರಮಣಿ, ಡಿ.ವಿ.ನಾರಾಯಣಸ್ವಾಮಿ, ಚಂದ್ರಶೇಖರ್.ಜೆ.ಸಿ. ರಾಧಮ್ಮ, ಮುನೇಗೌಡ, ನವೀನ್, ರವಿಕುಮಾರ್, ಮುನಿಆಂಜಿನಪ್ಪ ಹಾಜರಿದ್ದರು.








