ತಮಿಳುನಾಡಿನ ಕನ್ನಡ ಸರ್ಕಾರಿ ಶಾಲೆಯಲ್ಲಿ ಕಸಾಪ ಕಾರ್ಯಕ್ರಮ

Kasapa Sidlaghatta Kannada Sahitya Parishat Tamilnadu Government School Medium

ತಮಿಳುನಾಡಿನಲ್ಲಿರುವ ಡೆಂಕಣಿಕೋಟೆ ತಾಲ್ಲೂಕು ಕೃಷ್ಣಗಿರಿ ಜಿಲ್ಲೆಯ ಅಚ್ಚ ಕನ್ನಡದ ಹಳ್ಳಿ ಗುಮ್ಮಳಾಪುರದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಶಿಡ್ಲಘಟ್ಟ ಕಸಾಪ ತಾಲ್ಲೂಕು ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.

ಕನ್ನಡಾಭಿಮಾನವನ್ನು ನಮ್ಮ ರಾಜ್ಯದ ಗಡಿಭಾಗದಲ್ಲಿ ಅದರಲ್ಲೂ ತಮಿಳುನಾಡಿನಲ್ಲಿ ಮೆರೆಸುತ್ತಿರುವ ಗುಮ್ಮಳಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಎಷ್ಟು ಮೆಚ್ಚುಗೆ ಸೂಚಿಸಿದರೂ ಸಾಲದು. ತಮಿಳುನಾಡಿಗೆ ಸೇರಿದರೂ ಈ ಹಳ್ಳಿಗಳಲ್ಲಿ 100 ಕ್ಕೆ 100 ರಷ್ಟು ಕನ್ನಡಿಗರೇ ಇದ್ದಾರೆ. ಕನ್ನಡ ಮಾಧ್ಯಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 160 ಮಕ್ಕಳು ಮತ್ತು ಪ್ರೌಢಶಾಲೆಯಲ್ಲಿ 250 ಮಕ್ಕಳು ಕಲಿಯುತ್ತಿರುವುದು ಕನ್ನಡ ಪ್ರೇಮದ ಕುರುಹಾಗಿದೆ ಎಂದು ಅವರು ತಿಳಿಸಿದರು.

 ನೀವು ಮುಂದೆ ಎಷ್ಟೇ ದೊಡ್ಡ ಸಾಧಕರಾದರೂ ತಾಯ್ನುಡಿ ಕನ್ನಡವನ್ನು, ತಂದೆ ತಾಯಿ ಗುರು ಹಿರಿಯರನ್ನು ಮರೆಯದಿರಿ. ಕನ್ನಡ ಭಾಷೆಗೆ ಮೊದಲ ಆದ್ಯತೆಯನ್ನು ನೀಡಿ. ಗುಮ್ಮಳಾಪುರದ ಕನ್ನಡ ಪ್ರೀತಿ ಮಾದರಿಯಾದದ್ದು. “ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ರಾಷ್ಟ್ರಕವಿ ಕುವೆಂಪು ಅವರ ನುಡಿಯನ್ನು ಅಕ್ಷರಶಃ ಪಾಲಿಸುತ್ತಿರುವಿರಿ. ಇದೇ ಕನ್ನಡಾಭಿಮಾನ ನಮ್ಮ ಒಳನಾಡಿನಲ್ಲಿಯೂ ಕೂಡ ಪ್ರತಿಯೊಬ್ಬ ಕನ್ನಡಿಗನೂ ಕೂಡ ಹೊಂದಿರಬೇಕು ಎಂದರು.

 ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವಿ ಮಾತನಾಡಿ, ಈ ಗ್ರಾಮದಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆ ಮತ್ತು ಪ್ರೌಢಶಾಲೆಗಳಿವೆ. ಪ್ರತಿಯೊಂದು ಅಂಗಡಿ ಮುಂಗಟ್ಟುಗಳ ಮೇಲೆ, ಪ್ರತಿಯೊಂದು ಮನೆಯ ಮೇಲೆ ಕನ್ನಡದ ಬೋರ್ಡುಗಳು ರಾರಾಜಿಸುತ್ತವೆ. ಎಲ್ಲಿ ನೋಡಿದರೂ ಕೂಡ ಕನ್ನಡದ ಕಲರವ. ಎಲ್ಲರ ಮನೆಯಲ್ಲೂ ಕನ್ನಡದ ಚಾನೆಲ್‌ಗಳು. ತಮಿಳು ನೆಲದಲ್ಲಿದ್ದರೂ ಈ ಗ್ರಾಮದ ಜನರ ಕನ್ನಡ ಅಭಿಮಾನ ಅಮೋಘ. ಕನ್ನಡ ನೆಲ ಬೆಂಗಳೂರಿನಲ್ಲೇ ಸಿಗದ ಭಾಷಾಭಿಮಾನ ನಿಮಗೆ ನಮ್ಮ ಗ್ರಾಮದಲ್ಲಿ ಸಿಗುತ್ತದೆ. ಈ ಗ್ರಾಮದಲ್ಲಿ ಅಷ್ಟೇ ಅಲ್ಲ. ಇದರ ಸುತ್ತಮುತ್ತಲಿನ ಗ್ರಾಮಗಳಾದ ಗಂಗನಹಳ್ಳಿ, ಹಳೇವೂರು, ದೇವರಬೆಟ್ಟ ಗ್ರಾಮಗಳಲ್ಲೂ ಇದೇ ಭಾಷಾಭಿಮಾನ ಕಾಣಬಹುದು. ನಮ್ಮಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಮೀಸಲಾತಿ ಸಿಗಬೇಕು. ಕರ್ನಾಟಕ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸಹಾಯಹಸ್ತವನ್ನು ಚಾಚಬೇಕು ಎಂದು ಹೇಳಿದರು.

 ಶಿಡ್ಲಘಟ್ಟ ಕಸಾಪ ತಾಲ್ಲೂಕು ಘಟಕದ ವತಿಯಿಂದ ಮಕ್ಕಳಿಗೆ ಕವನ ವಾಚನ, ಜಾನಪದ ಹಾಡು, ಪ್ರಬಂಧ ಮುಂತಾದ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಕನ್ನಡ ನಿಘಂಟುಗಳು, ಕನ್ನಡ ಸಾಧಕರ ಕುರಿತಾದ ಪುಸ್ತಕಗಳನ್ನು ನೀಡಲಾಯಿತು.

 ಕಸಾಪ ಸದಸ್ಯ ರಮೇಶ್, ಶಿಕ್ಷಕರಾದ ವಿ.ರವಿಚಂದ್ರ, ಪಿ.ವೆಂಕಟೇಶ್ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
https://www.sidlaghatta.com

📱 Join WhatsApp
https://wa.me/917406303366?text=Hi

Leave a Reply

Your email address will not be published. Required fields are marked *

error: Content is protected !!