ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಉದ್ಘಾಟನೆ

State Level Karate championship Sidlaghatta

ನಗರದ ಒಂದನೇ ನಗರ್ತ ಪೇಟೆಯ ಶ್ರೀ ಕಾಳಿಕಾಂಬ ಕಮಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್‌ ವತಿಯಿಂದ ಆಯೋಜಿಸಿದ್ದ 2020 -21 ನೇ ಸಾಲಿನ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಉದ್ಘಾಟಿಸಿ ಯುವ ಮತ್ತು ಕ್ರೀಡಾಭಿವೃದ್ಧಿ ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿದರು.

ಓದಿನ ಜೊತೆಗೆ ಮಕ್ಕಳು ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ. ಪೋಷಕರೂ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಲು ಆಸಕ್ತಿ ವಹಿಸಬೇಕು. ನಿಯಮಿತವಾಗಿ ದೇಹವನ್ನು ದಂಡಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನೂ ಸಹ ಬೆಳೆಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಸ್ವಯಂ ರಕ್ಷಣೆಗಾಗಿ ಎಲ್ಲಾ ಮಕ್ಕಳು ಕರಾಟೆ ಕಲಿಯಬೇಕು, ವಿಶೇಷವಾಗಿ ಹೆಣ್ಣುಮಕ್ಕಳು ಕರಾಟೆಯಲ್ಲಿ ಪ್ರಾವಿಣ್ಯತೆ ಸಾಧಿಸಿದರೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಕರಾಟೆ ಕಲಿಯುವ ಮಕ್ಕಳು ಜೀವನದಲ್ಲಿ ಅತ್ಯಂತ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೆ. ಶಿಕ್ಷಣದ ಜತೆಗೆ ಕರಾಟೆ ಕಲಿಯಬೇಕು. ಇದು ಜೀವನದಲ್ಲಿ ತುಂಬ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿದರು.

 ಶ್ರೀ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ಮುನಿರತ್ನಮಾಚಾರ್ ಮಾತನಾಡಿ, ಎಳೆಯ ವಯಸ್ಸಿನಲ್ಲಿ ಕಲಿಯುವ ವಿದ್ಯೆ ಜೀವನ ಪರ್ಯಂತ ನೆರವಾಗುತ್ತದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಖಾಯಿಲೆಗಳಿಂದ ದೂರವಿರಬಹುದು ಎಂದರು.

 ಬೆಂಗಳೂರು, ಗೌರಿಬಿದನೂರು, ಬಾಗೇಪಲ್ಲಿ, ಕೋಲಾರ ಮತ್ತು ಶಿಡ್ಲಘಟ್ಟದ ಒಟ್ಟು 70 ಮಕ್ಕಳು ಕರಾಟೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಜನವರಿ 29, 30 ಮತ್ತು 31 ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಶಿಡ್ಲಘಟ್ಟದ ಸ್ಪರ್ಧೆಯಲ್ಲಿನ ವಿಜೇತರು ಪಾಲ್ಗೊಳ್ಳಲು ಅರ್ಹರಾಗುತ್ತಾರೆ ಎಂದು ಕರಾಟೆ ಶಿಕ್ಷಕರು ತಿಳಿಸಿದರು.

 ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್‌ನ ಕರಾಟೆ ಶಿಕ್ಷಕ ಅರುಣ್ ಕುಮಾರ್, ಮುನಿರಾಜು, ಬಾಗೇಪಲ್ಲಿ ಕರಾಟೆ ಶಿಕ್ಷಕ ವೆಂಕಟಾದ್ರಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!