Sidlaghatta : “ಇಂದಿನ ರಾಜಕಾರಣವು ಕೇವಲ ಹಣದ ವ್ಯವಹಾರವಾಗಿ ಮಾರ್ಪಟ್ಟಿದೆ. ಯಾರು ಹೆಚ್ಚು ಬಂಡವಾಳ ಹಾಕಬಲ್ಲರೋ ಮತ್ತು ಯಾರು ಜಾತಿ-ಧರ್ಮಗಳನ್ನು ಪ್ರಚೋದಿಸಬಲ್ಲರೋ ಅವರನ್ನೇ ಯೋಗ್ಯ ಅಭ್ಯರ್ಥಿಗಳೆಂದು ಪಕ್ಷಗಳು ಪರಿಗಣಿಸುತ್ತಿವೆ,” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಶ್ರೀರಾಮ ಪ್ಯಾಲೆಸ್‌ನಲ್ಲಿ ಆಯೋಜಿಸಲಾಗಿದ್ದ “ಮಣ್ಣಿನ ಆರೋಗ್ಯ ಮತ್ತು ರೈತರ ಭೂಮಿ ರೈತರಿಂದ ಕಳೆದುಹೋಗುತ್ತಿರುವ ಬಗ್ಗೆ” ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡುತ್ತಿದ್ದರು.
ಪರ್ಯಾಯ ರಾಜಕಾರಣದತ್ತ ಹೆಜ್ಜೆ: ಪ್ರಸ್ತುತ ಇರುವ ಭ್ರಷ್ಟ ರಾಜಕಾರಣಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಮಾರ್ಚ್ ಕೊನೆಯಲ್ಲಿ ಕಲ್ಬುರ್ಗಿಯಲ್ಲಿ ಬೃಹತ್ ರೈತ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಅವರು ಘೋಷಿಸಿದರು. “ಗಾಂಧಿಯ ಹೆಸರನ್ನು ತೆಗೆದು ರಾಮನ ಹೆಸರನ್ನು ಇಡುವುದರಿಂದ ಕ್ರಾಂತಿಯಾಗುತ್ತದೆ ಎಂಬ ಭ್ರಮೆಯಿದ್ದರೆ ಅದು ಮೂರ್ಖತನ. ರಾಜಕೀಯ ಪಕ್ಷಗಳು ಬಡವರನ್ನು ಮೇಲೆತ್ತುವ ಬದಲು ಯೋಜನೆಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿವೆ,” ಎಂದು ಅವರು ಟೀಕಿಸಿದರು.
ಸರ್ಕಾರದ ವಿರುದ್ಧ ವಾಗ್ದಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ಈಗ ಅದನ್ನು ಮುಂದುವರಿಸುತ್ತಿರುವುದು ದೌರ್ಭಾಗ್ಯ. ರೈತರಿಂದ ಜಮೀನು ಪಡೆದು ಕೈಗಾರಿಕೆಗಳಿಗೆ ನೀಡುವ ಮೂಲಕ ಅನ್ನದಾತನನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಣ್ಣಿನ ಆರೋಗ್ಯವೇ ಜೀವಾಳ: ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಡಾ.ಎಸ್. ಅನಿಲ್ ಕುಮಾರ್ ಮಾತನಾಡಿ, “ಭೂಮಿ ಕೇವಲ ಆಹಾರ ಬೆಳೆಯುವ ಕಾರ್ಖಾನೆಯಲ್ಲ, ಅದು ನಮ್ಮ ಸಂಸ್ಕೃತಿ. ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಕೆಡುತ್ತಿದೆ,” ಎಂದು ಎಚ್ಚರಿಸಿದರು. ತಹಶೀಲ್ದಾರ್ ಗಗನಸಿಂಧು ಅವರು ಮಾತನಾಡಿ, ರೈತರ ಸಮಸ್ಯೆಗಳಿಗೆ ತಾಲೂಕು ಕಚೇರಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.








