Melur, Sidlaghatta : ಮಹಿಳೆಯರು, ಆರ್ಥಿಕವಾಗಿ ಸಬಲರಾಗುವುದಕ್ಕಾಗಿ, ಸ್ವಯಂ ಉದ್ಯೋಗ ಮಾಡಲು ಕೌಶಲ್ಯಾಧಾರಿತ ತರಬೇತಿಗಳನ್ನು ಪಡೆದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಿಕೊಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ಸದಸ್ಯ ಎ.ಎಂ.ತ್ಯಾಗರಾಜ್ ಹೇಳಿದರು.
ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಳ್ಳೂರು ವಲಯದ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮಹಿಳೆಯರು, ಸ್ವಯಂ ಉದ್ಯೋಗ ನಡೆಸಲು ಅಗತ್ಯವಾಗಿರುವ ಕೌಶಲ್ಯಾಧಾರಿತ ತರಬೇತಿಗಳನ್ನು ರುಡ್ ಸೆಟ್ ಸಂಸ್ಥೆ ನೀಡುತ್ತಿದೆ. ಇಂತಹ ಸಂಸ್ಥೆಗಳಲ್ಲಿ ಸಿಗುವಂತಹ ತರಬೇತಿಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯ ತರಬೇತಿದಾರ ಶಶಿಧರ್ ಅವರು ಮಾತನಾಡಿ, ರುಡ್ ಸೆಟ್ ಸಂಸ್ಥೆಯ ಮೂಲಕ ಮಹಿಳೆಯರಿಗೆ ಅಗತ್ಯವಾಗಿರುವ ಟೈಲರಿಂಗ್, ಬ್ಯೂಟಿಷಿಯನ್, ಕುರಿ ಸಾಕಾಣಿಕೆ, ಮೊಬೈಲ್ ರಿಪೇರಿ, ಹಣಬೆ ಬೇಸಾಯ, ಜೇನುಸಾಕಾಣಿಕೆ ಸೇರಿದಂತೆ ಹಲವಾರು ತರಬೇತಿಗಳು ಸಿಗುತ್ತವೆ. ಇಂತಹ ತರಬೇತಿಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ಕಮಲಮ್ಮವೆಂಕಟರಾಯಪ್ಪ, ವಲಯದ ಮೇಲ್ವಿಚಾರಕರು ಧನಂಜಯ. ಒಕ್ಕೂಟ ಅಧ್ಯಕ್ಷೆ ಪ್ರಭಾ, ಮಂಜುಳಾ. ಶಾಲಾ ಶಿಕ್ಷಕಿ ಗಾಯತ್ರಿ, ಜಿ.ಕೆ.ಶಿವಾನಂದ, ರಂಗಯ್ಯ ಸಮನ್ವಯ ಅಧಿಕಾರಿ ಅರುಣಾ, ಸೇವಾ ಪ್ರತಿನಿಧಿ ಮುನಿರತ್ನ, ಹಾಗೂ ಕೇಂದ್ರದ ಸದಸ್ಯರು ಹಾಜರಿದ್ದರು.