Sidlaghatta, chikkaballapur : ಪದ್ಮಶ್ರೀ ಪುರಸ್ಕೃತ ಪಿಂಡಿಪಾಪನಹಳ್ಳಿಯ ತಮಟೆವಾದಕ ನಾಡೋಜ ಮುನಿವೆಂಕಟಪ್ಪ ಅವರ ಆರೋಗ್ಯ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರದಿಂದ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅವರ ಮೊಮ್ಮಗ ಪ್ರಸನ್ನ ಕುಮಾರ್ ಶುಕ್ರವಾರ ಚಿಂತಾಮಣಿಯ ಡೆಕ್ಕನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಎಂ.ಆರ್.ಐ ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದ್ದಾರೆ. ಅಲ್ಲಿ ವೈದ್ಯರು ಸೋಡಿಯಂ ಕಡಿಮೆ ಆಗಿರುವ ಹಾಗಿದೆ, ಪಾರ್ಶ್ವವಾಯು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಿ, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ. ಅಲ್ಲಿಯೂ ಹಲವು ಟೆಸ್ಟ್ ಗಳನ್ನು ಮಾಡಿ, ಇಲ್ಲಿ ಐ.ಸಿ.ಯು ಇಲ್ಲ, ಖಾಸಗಿ ಆಸ್ಪತೆಗೆ ಹೋಗಿ ಎಂದು ಹೇಳಿದ್ದಾರೆ. ಆನಂತರ ಅವರು ಬೇಗೂರಿನ ಜಯಶ್ರೀ ಆಸ್ಪತ್ರೆಗೆ ಶನಿವಾರ ದಾಖಲಿಸಿದ್ದು, ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
“ಜಿಲ್ಲಾಧಿಕಾರಿ ಅವರಿಗೆ ಹಲವು ಬಾರಿ ಕರೆ ಮಾಡಿದೆ. ಅವರು ಕರೆ ಸ್ವೀಕರಿಸಲಿಲ್ಲ. ಅವರ ಪಿ.ಎ ಗೆ ಕರೆ ಮಾಡಿದೆ. ಅವರು ಮಾತನಾಡಿ ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಅವರು ಇಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತನಾಡಿದರು” ಎಂದು ಮುನಿವೆಂಕಟಪ್ಪ ಅವರ ಮೊಮ್ಮಗ ಪ್ರಸನ್ನ ಕುಮಾರ್ ತಿಳಿಸಿದರು.








