Melur, Sidlaghatta : 17 ವರ್ಷದ ಯುವ ಪ್ರತಿಭೆ, ಮೇಲೂರಿನ ವಜ್ರಲ್ ಗೌಡ ಅವರು ಪವರ್ ಲಿಫ್ಟಿಂಗ್ (Power Lifting) ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು (Five Gold Medals) ಗೆದ್ದು ಭಾರತವನ್ನು ಪ್ರತಿನಿಧಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಮೇಲೂರಿನ ಜನತೆ ಅಭಿನಂದಿಸಿದ್ದಾರೆ.
ಸಂಜಯ ನಗರದ ಪರ್ಹ್ಹಾನ್ ಹುಸೇನ್ ಎಂಬ ಗುರುಗಳ ಮೂಲಕ ತರಬೇತಿ ಪಡೆದಿರುವ ವಜ್ರಲ್, ಈವರೆಗೆ ರಾಷ್ಟ್ರೀಯ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಸಾಧನೆ ಮಾಡಿದ ನಂತರ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
“ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುವುದೆಂದರೆ ಸಂತೋಷ ತರುತ್ತದೆ. ಮಾಸ್ಕೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನಾನು ಐದು ಗೋಲ್ಡ್ ಮೆಡಲ್ಸ್ ಸಾಧನೆ ಮಾಡಿದ್ದೇನೆ. ನನ್ನ ಈ ಸಾಧನೆಯ ಹಿಂದೆ ನನ್ನ ತಾಯಿ ಮತ್ತು ಸಹೋದರಿಯರ ಅಪಾರವಾದ ಬೆಂಬಲವಿದೆ” ಎಂದು ವಜ್ರಲ್ ಗೌಡ ಹೆಮ್ಮೆಯಿಂದ ಹೇಳುತ್ತಾರೆ.
“ಹದಿನಾರನೇ ವಯಸ್ಸಿನಿಂದಲೇ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಏನಾದರೂ ವಿಶೇಷವಾದ ಸಾಧನೆ ಮಾಡಬೇಕೆಂಬ ಹಂಬಲದಿಂದ ಅಭ್ಯಾಸದಲ್ಲಿ ತೊಡಗಿದ್ದೆ. ಪರಿಣಾಮವಾಗಿ ವರ್ಲ್ಡ್ ಕಪ್‌ನಲ್ಲಿ ಐದು ಮೆಡಲ್ ಗೆಲ್ಲಲು ಸಾಧ್ಯವಾಗಿದೆ. ರಷ್ಯಾ, ಖಜಕಿಸ್ಥಾನ ಸೇರಿದಂತೆ ಏಳು ದೇಶಗಳ ಸ್ಪರ್ಧಿಗಳ ನಡುವೆ ಸ್ಪರ್ಧೆ ಇತ್ತು. ನಾನು ಭಾರತ ದೇಶದ ಪ್ರತಿನಿಧಿಯಾಗಿ ತೋರಿದ ಉತ್ತಮ ಸಾಧನೆಯ ಕಾರಣಕ್ಕಾಗಿ ಈ ಗುರಿ ತಲುಪಲು ಸಾಧ್ಯವಾಯಿತು” ಎಂದು ಅವರು ತಮ್ಮ ಯಶಸ್ಸಿನ ಹಿಂದಿನ ಶ್ರಮವನ್ನು ವಿವರಿಸಿದರು.
ವಜ್ರಲ್ ಗೌಡ ಅವರು ಮೇಲೂರಿನಿಂದ ಎಂ.ಎಲ್.ಸಿ ಆಗಿದ್ದ ನಂಜುಂಡಪ್ಪ ಅವರ ಮರಿಮೊಮ್ಮಗನಾಗಿದ್ದು, ಸಣ್ಣ ವಯಸ್ಸಿನಲ್ಲಿ ತಂದೆ ವಿಕ್ರಂ ಅವರನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದಿದ್ದಾರೆ.
ಕಂಬದಹಳ್ಳಿಯ ಬಿಜೆಪಿ ಮುಖಂಡ ಸುರೇಂದ್ರ ಗೌಡ ಮತ್ತು ಕಾಂಗ್ರೆಸ್ ಮುಖಂಡ ಕೆ. ಮಂಜುನಾಥ್ ಸೇರಿದಂತೆ ಹಲವು ಗಣ್ಯರು, ಅವರ ಈ ಅಮೋಘ ಸಾಧನೆಯನ್ನು ಶ್ಲಾಘಿಸಿದರು. ಕೆ. ಮಂಜುನಾಥ್ ಅವರು ವಜ್ರಲ್ ಗೌಡ ಅವರನ್ನು ಮನೆಗೆ ಆಹ್ವಾನಿಸಿ ಸಿಹಿ ತಿನ್ನಿಸಿ ಗೌರವಿಸಿ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇಂತಹ ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಆಶಿಸಿದರು.
ಪವರ್ ಲಿಫ್ಟಿಂಗ್‌ನಲ್ಲಿ ಅಮೋಘ ಸಾಧನೆ ತೋರಿರುವ ಈ ಜಿಲ್ಲೆಯ ಅಪರೂಪದ ಪ್ರತಿಭೆಯನ್ನು ಮೇಲೂರಿನ ಗ್ರಾಮಸ್ಥರು ಪ್ರೀತಿಯಿಂದ ಬರಮಾಡಿಕೊಂಡು ಹಾರ ತುರಾಯಿ ಹಾಕುವ ಮೂಲಕ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.








