ಪ್ರಜಾಸೇವಾ ಆಂದೋಲನದಲ್ಲಿ 600ಕ್ಕೂ ಹೆಚ್ಚು ಅರ್ಜಿ: KIADBಗೆ ಜಮೀನು ನೀಡಲು ಒಪ್ಪದ ಸುಮಾರು 200 ರೈತರು

- Advertisement -
- Advertisement -

Sidlaghatta : ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಪರಿಹಾರ ಕೋರಿ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅಧಿಕಾರಿಗಳೇ ಜನರ ಬಳಿಗೆ ತೆರಳಿ ಅಹವಾಲು ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಅಶ್ವಿನ್ ಹೇಳಿದರು. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಜಂಗಮಕೋಟೆ ನಾಡಕಚೇರಿ ಆವರಣದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.

“ಜನರು ಅರ್ಜಿಗಳನ್ನು ಹಿಡಿದು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಆಂದೋಲನದ ಉದ್ದೇಶ. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ” ಎಂದರು.

ಎಷ್ಟು ಅರ್ಜಿಗಳು ಸಲ್ಲಿಕೆಯಾದವು?

ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ 600ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿ ಸ್ವೀಕಾರ ಮುಂದುವರಿದಿದೆ. ಈ ಪೈಕಿ 400ಕ್ಕೂ ಹೆಚ್ಚು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿವೆ. KIADBಗೆ ಜಮೀನು ನೀಡಲು ಇಚ್ಛಿಸುವುದಿಲ್ಲ ಎಂದು ಸುಮಾರು 200 ರೈತರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ದರಕಾಸ್ತು ಸಮಿತಿಗೆ ಸಂಬಂಧಿಸಿದಂತೆ 53, 57 ಮಂಜೂರು, ಪೋಡಿ, ದರಕಾಸ್ತು ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಸೂಕ್ತ ದಾಖಲೆಗಳಿರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಲಾಗುವುದು. ದಾಖಲೆಗಳ ಕೊರತೆಯಿರುವ ಅರ್ಜಿಗಳು ಹಾಗೂ ದರಕಾಸ್ತು ಸಮಿತಿಯ ವ್ಯಾಪ್ತಿಗೆ ಬರುವ ವಿಷಯಗಳನ್ನು ಸಮಿತಿಯ ಸಭೆಯ ನಿರ್ಧಾರದಂತೆ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್. ಹೇಮಾವತಿ, ತಹಶೀಲ್ದಾರ್ ಎನ್. ಗಗನಸಿಂಧು, ತಹಶೀಲ್ದಾರ್ ಗ್ರೇಡ್–2 ಕೆ.ಎನ್.ಎಂ. ಮಂಜುನಾಥ್, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್, ಭೂಮಾಪನ ಇಲಾಖೆಯ ರಾಮಕೃಷ್ಣಪ್ಪ, ಕೃಷಿ ಇಲಾಖೆಯ ಪಿ. ರವಿ, ತೋಟಗಾರಿಕೆ ಇಲಾಖೆಯ ಮಂಜುನಾಥ್, ಶಿಶು ಅಭಿವೃದ್ಧಿ ಇಲಾಖೆಯ ದಿವ್ಯ ವಸ್ತ್ರದ್, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್, ರೇಷ್ಮೆ ಇಲಾಖೆಯ ಅಕ್ಮಲ್ ಪಾಷ, ಆರೋಗ್ಯ ಇಲಾಖೆಯ ಡಾ. ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Large crowd of applicants waiting at Prajaseva Andolana in Jangamakote hobli, Sidlaghatta

ಸರ್ವರ್ ಸಮಸ್ಯೆ: ಅರ್ಜಿದಾರರಿಗೆ ತೊಂದರೆ

ಪ್ರಜಾಸೇವಾ ಆಂದೋಲನ ಆರಂಭವಾದರೂ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿದಾರರಿಗೆ ಸ್ವೀಕೃತಿ ಪ್ರತಿ ನೀಡಲು ಸಾಧ್ಯವಾಗದೆ ಮಧ್ಯಾಹ್ನದವರೆಗೂ ಅರ್ಜಿ ಸ್ವೀಕಾರ ಪ್ರಕ್ರಿಯೆ ನಿಧಾನಗೊಂಡಿತ್ತು. ಬಳಿಕ ಸ್ವೀಕೃತಿ ನೀಡದೆ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಿದ ಅಧಿಕಾರಿಗಳು, ನಂತರ ಸ್ವೀಕೃತಿ ಪಡೆಯಲು ಬರುವಂತೆ ಸೂಚಿಸಿದ್ದರಿಂದ ಸಾರ್ವಜನಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು.

ಸಂಜೆ 5 ಗಂಟೆಯಾದರೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿದಿತ್ತು. ಸರ್ವರ್ ಸಮಸ್ಯೆಯಿಂದಾಗಿ ಹಲವು ಮಂದಿ ಅರ್ಜಿ ಸಲ್ಲಿಸಲಾಗದೆ ವಾಪಸಾದರು. ಬಹುತೇಕ ಅರ್ಜಿದಾರರ ಮೊಬೈಲ್ ಸಂಖ್ಯೆ ಪಡೆದು ಸ್ವೀಕೃತಿ ನೀಡುವ ವ್ಯವಸ್ಥೆ ಮಾಡಲಾಯಿತು.

ವಿಶೇಷ ಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲ

ಸಾದಲಿ, ಬಶೆಟ್ಟಹಳ್ಳಿ ಹಾಗೂ ಕಸಬಾ ಹೋಬಳಿಗಳಲ್ಲಿ ಪ್ರಜಾಸೇವಾ ಆಂದೋಲನ ಪೂರ್ಣಗೊಂಡ ಬಳಿಕ ಜಂಗಮಕೋಟೆ ಹೋಬಳಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ವಿಶೇಷ ಚೇತನರಿಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಕೌಂಟರ್ ಅಥವಾ ಸರತಿ ಸಾಲಿನ ವ್ಯವಸ್ಥೆ ಮಾಡಿರಲಿಲ್ಲ.

ವೇದಿಕೆಗೆ ತೆರಳಲು ರ‍್ಯಾಂಪ್ ವ್ಯವಸ್ಥೆಯೂ ಇಲ್ಲದ ಕಾರಣ ಕಾರ್ಯಕ್ರಮಕ್ಕೆ ಬಂದಿದ್ದ 30ಕ್ಕೂ ಹೆಚ್ಚು ವಿಶೇಷ ಚೇತನರು ಅಧಿಕಾರಿಗಳಿಗೆ ಅಹವಾಲು ಸಲ್ಲಿಸಲು ಪರದಾಡುವಂತಾಯಿತು. ಕೆಲವರು ಸಾಮಾನ್ಯ ಸರತಿ ಸಾಲಿನಲ್ಲಿಯೇ ಗಂಟೆಗಟ್ಟಲೆ ನಿಲ್ಲಬೇಕಾಯಿತು.

ವಿಶೇಷ ಚೇತನರ ಬಳಿಗೆ ತೆರಳಿ ಅಹವಾಲು ಸ್ವೀಕರಿಸುವ ವ್ಯವಸ್ಥೆಯನ್ನೂ ಅಧಿಕಾರಿಗಳು ಮಾಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.

ಸ್ಥಳ ಬದಲಾವಣೆ; ಸಾರ್ವಜನಿಕರಿಗೆ ಮಾಹಿತಿ ಇಲ್ಲ

ಜಂಗಮಕೋಟೆ ಹೋಬಳಿಯ ಪ್ರಜಾಸೇವಾ ಆಂದೋಲನವನ್ನು ಮೊದಲಿಗೆ ಹೊಸಪೇಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಸಲಾಗುವುದು ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಶುಕ್ರವಾರ ಸಂಜೆ ಕಾರ್ಯಕ್ರಮದ ಸ್ಥಳವನ್ನು ದಿಢೀರ್‌ ಬದಲಿಸಿ ಜಂಗಮಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಸಲಾಯಿತು. ಸ್ಥಳ ಬದಲಾವಣೆಯ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡದ ಕಾರಣ ಕೆಲವರು ಗೊಂದಲಕ್ಕೊಳಗಾದರು.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರಿಂದ ಜಂಗಮಕೋಟೆ–ಸುಗಟೂರು ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಯಿತು. ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿದ್ದರಿಂದ ಕೆಲಕಾಲ ಸಂಚಾರಕ್ಕೆ ಅಡ್ಡಿಯಾಯಿತು. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರೇ ವಾಹನಗಳಿಗೆ ದಾರಿ ಮಾಡಿಕೊಟ್ಟು ಸಂಚಾರ ಸುಗಮಗೊಳಿಸುವಂತಾಯಿತು.

ಪ್ರಜಾಸೇವಾ ಆಂದೋಲನದ ಹಿಂದಿನ ಹಂತಗಳ ಕುರಿತು ಅರ್ಜಿ ಸ್ವೀಕೃತಿ ನೀಡದ ಸಿಬ್ಬಂದಿಗೆ ಪ್ರಜಾಸೇವಾ ಆಂದೋಲನದಲ್ಲಿ ಜಿಲ್ಲಾಧಿಕಾರಿ ತರಾಟೆ ಹಾಗೂ 8 ದಿನಗಳಲ್ಲಿ ಅರ್ಜಿ ಇತ್ಯರ್ಥಪಡಿಸಿ: ಬಶೆಟ್ಟಿಹಳ್ಳಿ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ರವಿಕುಮಾರ್ ಸೂಚನೆ ವರದಿಗಳನ್ನು, KIADB ಭೂಸ್ವಾಧೀನ ವಿರೋಧದ ಕುರಿತು ರೈತರ ಜಮೀನು ಕಿತ್ತುಕೊಂಡರೆ ರೇಷ್ಮೆ ಗೂಡು ಮಾರುಕಟ್ಟೆ ಸ್ಮಶಾನ: ಭೂಸ್ವಾಧೀನ ವಿರೋಧಿಸಿ ಬೈಕ್ ಜಾಥಾ ವರದಿಯನ್ನೂ ಓದಿ.

In English: The Prajaseva Andolana aims to spare people from running between offices by having officials go to them to hear and resolve grievances, Assistant Commissioner (sub-divisional officer) Ashwin said while inaugurating the programme at the Jangamakote Nadakacheri (hobli revenue office) premises in Jangamakote hobli, Sidlaghatta taluk, on Saturday. Over 600 applications were received, with submissions continuing; more than 400 relate to the revenue department, and about 200 farmers applied stating they do not wish to give their land to KIADB (Karnataka Industrial Areas Development Board). Applications on Form 53/57 grants, podi and darkhast with proper documents will be settled in a time-bound manner, and others as decided by the darkhast committee. A server problem meant acknowledgment receipts could not be issued until the afternoon, leaving people queuing for hours; some left without applying, and mobile numbers were collected so receipts could be sent later. There was no separate counter, queue or ramp for persons with disabilities, and over 30 of them struggled to submit grievances. The venue, originally publicised as Hosapete Gram Panchayat, was changed at short notice on Friday evening to Jangamakote, causing confusion, and traffic congestion on the Jangamakote–Sugaturu road had to be cleared by the public in the absence of police control.

FAQ

ಪ್ರಜಾಸೇವಾ ಆಂದೋಲನದ ಉದ್ದೇಶವೇನು?
ಸಾರ್ವಜನಿಕರು ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅಧಿಕಾರಿಗಳೇ ಜನರ ಬಳಿಗೆ ತೆರಳಿ ಅಹವಾಲು ಆಲಿಸಿ ಪರಿಹಾರ ಕಲ್ಪಿಸುವುದು ಆಂದೋಲನದ ಉದ್ದೇಶ ಎಂದು ಉಪವಿಭಾಗಾಧಿಕಾರಿ ಅಶ್ವಿನ್ ತಿಳಿಸಿದ್ದಾರೆ.

ಜಂಗಮಕೋಟೆ ಹೋಬಳಿಯಲ್ಲಿ ಎಷ್ಟು ಅರ್ಜಿಗಳು ಸಲ್ಲಿಕೆಯಾದವು?
600ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ 400ಕ್ಕೂ ಹೆಚ್ಚು ಕಂದಾಯ ಇಲಾಖೆಗೆ ಸಂಬಂಧಿಸಿವೆ. KIADBಗೆ ಜಮೀನು ನೀಡಲು ಇಚ್ಛಿಸುವುದಿಲ್ಲ ಎಂದು ಸುಮಾರು 200 ರೈತರು ಅರ್ಜಿ ಸಲ್ಲಿಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -