ಅರ್ಜಿ ಸ್ವೀಕೃತಿ ನೀಡದ ಸಿಬ್ಬಂದಿಗೆ ಪ್ರಜಾಸೇವಾ ಆಂದೋಲನದಲ್ಲಿ ಜಿಲ್ಲಾಧಿಕಾರಿ ತರಾಟೆ

- Advertisement -
- Advertisement -

Sidlaghatta : ಪ್ರಜಾಸೇವಾ ಆಂದೋಲನದ ಸಭೆಗಳನ್ನು ಮೊದಲು ಹೋಬಳಿ ಹಾಗೂ ನಂತರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರದ ನಿರ್ದೇಶನದಂತೆ ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಸೂಚಿಸಿದರು.

ತಾಲ್ಲೂಕಿನ ವೈ. ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಆರ್.ಇ.ಟಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಎರಡು ಶನಿವಾರ ನಡೆದ ಆಂದೋಲನ ಸಭೆಗಳು ತೃಪ್ತಿಕರವಾಗಿ ನಡೆದಿವೆ. ಆದರೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನಿರೀಕ್ಷಿತ ಮಟ್ಟದಲ್ಲಿ ಸಭೆ ನಡೆಯದಿರುವುದು ಕಂಡುಬಂದಿದ್ದು, ಕರ್ತವ್ಯಲೋಪಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿಯನ್ನು ಸ್ವೀಕರಿಸಿ ಸ್ವೀಕೃತಿ ನೀಡಬೇಕು ಹಾಗೂ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

1.4 ಲಕ್ಷ ಮನೆಗಳಿಗೆ ಹಕ್ಕುಪತ್ರ

ಜಿಲ್ಲೆಯಲ್ಲಿ ದಾಖಲೆಗಳಿಲ್ಲದೆ ಅನಧಿಕೃತವಾಗಿ ನಿರ್ಮಿಸಿರುವ ಸುಮಾರು 1.4 ಲಕ್ಷ ಮನೆಗಳಿಗೆ ಮುಂದಿನ ನಾಲ್ಕು ತಿಂಗಳಲ್ಲಿ ಕಂದಾಯ ಗ್ರಾಮ ಅಭಿಯಾನದಡಿ ಮಾಲೀಕತ್ವದ ದಾಖಲೆ ಹಾಗೂ ಹಕ್ಕುಪತ್ರಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪ್ರತಿ ತಾಲ್ಲೂಕಿನ 50ರಿಂದ 60 ಗ್ರಾಮಗಳಲ್ಲಿ ಈಗಾಗಲೇ ಅಳತೆ ಕಾರ್ಯ ಪೂರ್ಣಗೊಂಡಿದ್ದು, ಪೌತಿ ಖಾತೆ ಸೇರಿದಂತೆ ಕಂದಾಯ ದಾಖಲೆಗಳ ವಿಲೇವಾರಿಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.

1.53 ಲಕ್ಷ ರೈತರಿಗೆ ಬೆಳೆ ವಿಮೆ

ಜಿಲ್ಲೆಯಲ್ಲಿ ಶೇ 60ರಷ್ಟು ಮಳೆ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, 1.53 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಮುಂದಿನ 10 ದಿನಗಳಲ್ಲಿ ₹74 ಕೋಟಿ ವಿಮಾ ಮೊತ್ತ ಪಾವತಿಯಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಜಾನುವಾರುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ 12 ಸಾವಿರ ಬಿತ್ತನೆ ಬೀಜ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಶಿಡ್ಲಘಟ್ಟ ತಾಲ್ಲೂಕಿನ ಎಚ್.ಎನ್. ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವ ಕಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ನಿಗದಿತ ಪ್ರಮಾಣದಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪರಿಭಾವಿತ ಅರಣ್ಯ ಭೂಮಿ ಸಮಸ್ಯೆ ಪರಿಹಾರ

ಜಿಲ್ಲೆಯ ಪರಿಭಾವಿತ ಅರಣ್ಯ ಭೂಮಿ ಸಮಸ್ಯೆ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅಂತಿಮ ಕ್ರಮ ಕೈಗೊಳ್ಳುತ್ತಿದೆ. 597 ಸರ್ವೆ ನಂಬರ್‌ಗಳ ವ್ಯಾಪ್ತಿಯಲ್ಲಿರುವ ಸುಮಾರು 50 ಸಾವಿರ ಎಕರೆ ಸಮಸ್ಯಾತ್ಮಕ ಭೂಮಿಯ ಪೈಕಿ, ಮೂಲದಿಂದ ಉಳುಮೆ ಮಾಡುತ್ತಿರುವ ರೈತರಿಗೆ ಸೇರಿದ 20ರಿಂದ 25 ಸಾವಿರ ಎಕರೆ ಜಮೀನಿನ ಪಹಣಿ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ಈಗಾಗಲೇ 5 ಸಾವಿರ ಎಕರೆ ಜಮೀನನ್ನು ಪರಿಭಾವಿತ ಅರಣ್ಯ ವ್ಯಾಪ್ತಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಂಗನವಾಡಿ, ಆರೋಗ್ಯ ಸೇವೆಗೆ ಆದ್ಯತೆ

ಮುಂದಿನ ಒಂದು ವಾರದಲ್ಲಿ 200 ಅಂಗನವಾಡಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ಗರ್ಭಿಣಿಯರು ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಸಮರ್ಪಕಗೊಳಿಸಲಾಗುವುದು ಎಂದರು. 25 ವರ್ಷ ಮೇಲ್ಪಟ್ಟ ಜಿಲ್ಲೆಯ ಜನರಿಗೆ ಮನೆ ಬಾಗಿಲಲ್ಲೇ ಆರೋಗ್ಯ ತಪಾಸಣೆ ನಡೆಸಿ ರಕ್ತದೊತ್ತಡ, ಮಧುಮೇಹ, ಕುಷ್ಠರೋಗ, ಕ್ಷಯರೋಗ ಸೇರಿದಂತೆ 10 ಕಾಯಿಲೆಗಳನ್ನು ತಪಾಸಣೆ ಮಾಡಲಾಗುವುದು. ಅಗತ್ಯವಿರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ಒದಗಿಸುವ ಕಾರ್ಯಕ್ರಮವನ್ನೂ ಶೀಘ್ರ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಾಗೃತಿ ಮಳಿಗೆಗಳನ್ನು ತೆರೆಯಲಾಗಿತ್ತು. ಜಿಲ್ಲಾಧಿಕಾರಿ ಜಿ. ಪ್ರಭು ಅವರು ಸ್ವತಃ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ, ಅವುಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಸ್ವೀಕೃತಿ ನೀಡದ ಸಿಬ್ಬಂದಿಗೆ ತರಾಟೆ

ಪ್ರಜಾಸೇವಾ ಆಂದೋಲನದಲ್ಲಿ ಅಹವಾಲು ಸಲ್ಲಿಸಲು ಬಂದ ನಾಗರಿಕರಿಗೆ ಸಮರ್ಪಕ ಸ್ವೀಕೃತಿ ಪ್ರತಿಗಳನ್ನು ನೀಡದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಜಿ. ಪ್ರಭು ಅವರು ತಹಶೀಲ್ದಾರ್ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಹವಾಲು ಸಲ್ಲಿಸುವ ಪ್ರತಿಯೊಬ್ಬ ನಾಗರಿಕನಿಗೂ ಸ್ವೀಕೃತಿ ಸಂಖ್ಯೆ ಹೊಂದಿರುವ ಹಾಗೂ ಪ್ರತ್ಯೇಕ ಬಣ್ಣದಲ್ಲಿ ಗುರುತಿಸಲಾದ ಸ್ವೀಕೃತಿ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದರು.

“ಸುಮ್ಮನೆ ಅರ್ಜಿಗಳನ್ನು ಪಡೆದು ಸ್ವೀಕೃತಿ ನೀಡದೆ ನಾಗರಿಕರನ್ನು ಕಚೇರಿಗಳಿಗೆ ಅಲೆದಾಡಿಸುವುದು ಸರಿಯಲ್ಲ. ಇದು ಸಾರ್ವಜನಿಕರ ಬಗ್ಗೆ ತೋರುವ ಅಸಡ್ಡೆ,” ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಎಷ್ಟೇ ಸಮಯವಾದರೂ ಸರಿ, ಆಂದೋಲನದಲ್ಲಿ ಸಲ್ಲಿಕೆಯಾಗುವ ಎಲ್ಲ ಅಹವಾಲುಗಳಿಗೂ ಸರಿಯಾದ ಸ್ವೀಕೃತಿ ಪ್ರತಿಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಒ ಡಾ. ನವೀನ್ ಭಟ್ ವೈ., ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಆರ್., ತಹಶೀಲ್ದಾರ್ ಗಗನ ಸಿಂಧು, ಪೌರಾಯುಕ್ತೆ ಅಮೃತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

In English: Deputy Commissioner G. Prabhu warned officials of disciplinary action for lax conduct of Prajaseva Andolana meetings in the Sidlaghatta assembly segment, after launching the taluk-level programme at SRET High School, Y. Hunasenahalli. He publicly reprimanded the tahsildar and staff for failing to issue receipts to citizens filing grievances, and directed that every applicant must get a numbered, colour-coded receipt. He also announced that about 1.4 lakh unauthorised houses across the district will get ownership documents and title deeds within four months under the Kandaya Grama Abhiyana, that 1.53 lakh farmers who took crop insurance will receive Rs 74 crore in payouts within 10 days amid a severe drought (60% rainfall deficit), and that a Supreme Court-mandated committee is resolving deemed-forest-land disputes affecting nearly 50,000 acres, with 5,000 acres already released. He added that 200 anganwadi staff will be recruited within a week and a door-to-door health screening drive for residents above 25 will check for 10 diseases including diabetes and tuberculosis.

ಜಿಲ್ಲೆಯಲ್ಲಿ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದ ಮತ್ತೊಂದು ವರದಿಯಾದ 12 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ: ಐದು ದಿನಗಳಲ್ಲಿ ಈ-ಸ್ವತ್ತು ವಿತರಣೆ ಎಂಬ ಸುದ್ದಿಯನ್ನೂ ಓದಿ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -