
ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಬಳಿ ರೈಲ್ವೆಗೆ ಸೇರಿರುವ ಸರಿಸುಮಾರು ಏಳು ಎಕರೆ ಪ್ರದೇಶದಲ್ಲಿ ಕೆ.ವಿ.ಟ್ರಸ್ಟ್ ಹಿರಿಯ ವಿದ್ಯಾರ್ಥಿಗಳು ಮತ್ತು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರು ಒಂದು ಸಾವಿರ ಗಿಡ ನೆಟ್ಟಿದ್ದು, ಅವುಗಳ ಸಂರಕ್ಷಣೆಗೆ ಕಾಂಪೌಂಡ್ ನಿರ್ಮಿಸಿಕೊಡುವಂತೆ ಬೆಂಗಳೂರಿನ ಯಶವಂತಪುರ ರೈಲ್ವೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಶಿವಕುಮಾರ್ ಅವರಿಗೆ ರೈತ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಹಿಂದೆ ಹಲವು ಎಕರೆಗಳಷ್ಟು ರೈಲ್ವೆ ಜಾಗ ಖಾಲಿಯಾಗಿತ್ತು. ಅದರಲ್ಲಿ ಊರ ಕಸ ಸುರಿಯಲಾಗುತ್ತಿತ್ತು. ನಿರ್ವಹಣೆ ಇಲ್ಲದ ಆ ಸ್ಥಳದಲ್ಲಿ ಕಳೆಗಿಡಗಳು, ಮುಳ್ಳುಕಂಟಿಗಳೆಲ್ಲಾ ಬೆಳೆದಿದ್ದವು. ಜೆಸಿಬಿ ಬಳಸಿ, ಕಸ ತೆಗೆದವು. ಗಿಡ ತರಲು ಹಣ ಬೇಕಿತ್ತು. ರೈತ ಸಂಘದವರು ಮತ್ತು ಕೆ.ವಿ.ಟ್ರಸ್ಟ್ ಹಳೆ ವಿದ್ಯಾರ್ಥಿಗಳು ಜತೆಗೂಡಿ, ರೈಲ್ವೆ ಅಧಿಕಾರಿ ಅನುಮತಿ ಪಡೆದು 1000 ಗಿಡಗಳನ್ನು ನೆಡಲಾಗಿದೆ
ಕಿಡಿಗೇಡಿಗಳು ಅಲ್ಲಿ ಒಣಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ಅನೇಕ ಗಿಡಗಳಿಗೆ ಹಾನಿಯಾಗಿದೆ. ಈ ಭಾಗದ ಜನರು ತಂದು ಸುರಿಯುವ ತ್ಯಾಜ್ಯ, ಮಲಮೂತ್ರ ವಿಸರ್ಜನೆಗೆ ಬರುವವರು ಬೀಡಿ ಸೇದುವವರು ಹಾಕುವ ಬೆಂಕಿ ಗಿಡ ಪೋಷಣೆಗೆ ಅಡ್ಡಿಯಾಗಿದೆ. ಎಳೆಗಿಡಗಳನ್ನು ಕೆಲವರು ಮುರಿದರೆ, ಮೇಕೆ, ಕುರಿ ಮೇಯಿಸುವವರಿಂದ ಕೆಲವಾರು ಗಿಡಗಳನ್ನು ನಾವು ಕಳೆದುಕೊಳ್ಳಬೇಕಾಯಿತು.
ಈ ಹಿಂದೆ ರೈಲ್ವೆಯವರು ಕಾಂಪೌಂಡ್ ಮಾಡಿಸುವುದಾಗಿ ಭರವಸೆ ನೀಡಿದ್ದರು. ಇಲ್ಲಿ ತ್ಯಾಜ್ಯ ಹಾಕುವುದನ್ನು ಅನಗತ್ಯ ಓಡಾಡುವುದನ್ನು ತಡೆಯಬೇಕಿದೆ. ನಾವು ಕಷ್ಟಪಟ್ಟು ಗಿಡಗಳನ್ನು ಬೆಳೆಸುತ್ತಿರುವುದು ನಮ್ಮ ಊರಿನ ಅಭಿವೃದ್ಧಿಯ ಭಾಗವಾಗಿ ಎಂದು ರೈತ ಮುಖಂಡರು ರೈಲ್ವೆ ಇಲಾಖೆಯ ಅಧಿಕಾರಿಗೆ ವಿವರಿಸಿದರು.
ಮನವಿ ಸ್ವೀಕರಿಸಿದ ರೈಲ್ವೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಶಿವಕುಮಾರ್, ಅತಿ ಶೀಘ್ರದಲ್ಲಿ ಶಿಡ್ಲಘಟ್ಟಕ್ಕೆ ಭೇಟಿಕೊಟ್ಟು ಕಾಂಪೌಂಡ್ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ನಗರ ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಕೃಷ್ಣಪ್ಪ, ಖಜಾಂಚಿ ಪಿ.ವಿ.ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ ಹಾಜರಿದ್ದರು.