Sidlaghatta : “ದೀಪಾವಳಿ ಹಬ್ಬವನ್ನು ಸಂಭ್ರಮಿಸುವಾಗ ಪರಿಸರದ ಮೇಲಿನ ಹೊಣೆಗಾರಿಕೆಯನ್ನು ಮರೆಯಬಾರದು. ಪಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳು ಮತ್ತು ಪರಿಸರದ ದುಷ್ಪರಿಣಾಮಗಳ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕು,” ಎಂದು ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಹೇಳಿದ್ದಾರೆ.
ನಗರದ ಗರುಡಾದ್ರಿ ಶಾಲೆಯ ವಿದ್ಯಾರ್ಥಿಗಳಿಂದ ಶನಿವಾರ ಆಯೋಜಿಸಲಾದ “ಪಟಾಕಿ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಪಟಾಕಿ ಸಿಡಿಸುವುದರಿಂದ ಶಬ್ದ ಮತ್ತು ವಾಯು ಮಾಲಿನ್ಯ ಮಾತ್ರವಲ್ಲದೆ ಪಕ್ಷಿಗಳು, ಪ್ರಾಣಿಗಳು ಹಾಗೂ ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಹಸಿರು ದೀಪಾವಳಿ ಆಚರಣೆಗೆ ಮುಂದಾಗಿರುವುದು ಶ್ಲಾಘನೀಯ,” ಎಂದು ಹೇಳಿದರು.
ತಹಶೀಲ್ದಾರ್ ಗಗನ ಸಿಂಧು ಅವರು, “ಪರಿಸರ ಸ್ನೇಹಿ ದೀಪಾವಳಿ ಎಂದರೆ ಸಂತೋಷವನ್ನು ಕಡಿಮೆ ಮಾಡುವುದು ಅಲ್ಲ. ದೀಪಗಳನ್ನು ಹಚ್ಚಿ, ಸಿಹಿ ಹಂಚಿಕೊಂಡು, ಸಮುದಾಯದಲ್ಲಿ ಬೆಳಕು ಚೆಲ್ಲುವ ಮೂಲಕ ಹಬ್ಬದ ನಿಜವಾದ ಅರ್ಥವನ್ನು ಕಾಪಾಡೋಣ. ಪಟಾಕಿ ತ್ಯಜಿಸಿ, ಮಣ್ಣಿನ ದೀಪಗಳಿಂದ ಮನೆಗಳನ್ನು ಬೆಳಗಿಸೋಣ,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್, ನಗರ ಠಾಣಾ ಪಿಎಸ್‌ಐ ವೇಣುಗೋಪಾಲ್, ಗರುಡಾದ್ರಿ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.







