Home News “ಬಸವಾಪಟ್ಟಣ” ಗ್ರಾಮದ ಹೆಸರಿರುವ 500 ವರ್ಷ ಹಿಂದಿನ ಶಾಸನ ಕಲ್ಲು

“ಬಸವಾಪಟ್ಟಣ” ಗ್ರಾಮದ ಹೆಸರಿರುವ 500 ವರ್ಷ ಹಿಂದಿನ ಶಾಸನ ಕಲ್ಲು

0

Basavapatna, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಸವಾಪಟ್ಟಣ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ್ದ ಶಾಸನ ತಜ್ಞ ಕೆ. ಧನಪಾಲ್, ಗ್ರಾಮದಲ್ಲಿನ ವಿಜಯನಗರ ಕಾಲದ ಕನ್ನಡ ಶಾಸನದ ಕಲ್ಲಿನ ಮೇಲಿನ ಪಠ್ಯವನ್ನು ಓದಿ ಹಲವು ವಿಶೇಷ ಸಂಗತಿಗಳನ್ನು ವಿವರಿಸಿದರು.

ಬಸವಾಪಟ್ಟಣ ಗ್ರಾಮದಲ್ಲಿ ಇಡೀ ಗ್ರಾಮವನ್ನೇ ಉಂಬಳಿಯಾಗಿ ನೀಡಿರುವ ದಾಖಲೆಯಿರುವ ಶಾಸನದ ಕಲ್ಲನ್ನು ಸಾಸುರಸ್ವಾಮಿ ದೇವರೆಂದು ಪೂಜಿಸಲಾಗುತ್ತಿದೆ. ಶಾಸನದ ಕಲ್ಲಿಗೆ ಪ್ರಭಾವಳಿಯನ್ನೂ ಮಾಡಿಸಿದ್ದು ನಿತ್ಯ ಪೂಜೆ ಸಲ್ಲುತ್ತಿದೆ. ಸಾಸುರಸ್ವಾಮಿಯ ಉತ್ಸವಮೂರ್ತಿ ಕೂಡ ಇದ್ದು, ಕೈಯಲ್ಲಿ ಕೋಲು ಹಿಡಿದಿರುವ ಧೀರ ವ್ಯಕ್ತಿ ಗ್ರಾಮವನ್ನು ಸಂರಕ್ಷಿಸುವವನು ಎಂಬ ನಂಬಿಕೆ ಜನರಲ್ಲಿದೆ.

ಈ ಶಾಸನದ ಪಠ್ಯ ಮತ್ತು ಈ ಗ್ರಾಮದಲ್ಲಿರುವ ಮಾಸ್ತಿಕಲ್ಲು ಮತ್ತು ವೀರಗಲ್ಲುಗಳಿಂದ ಬಸವಾಪಟ್ಟಣ ಗ್ರಾಮವು ಸುಮಾರು 500 ವರ್ಷಗಳಿಗೂ ಹಿಂದೆಯೇ ಚಾರಿತ್ರಿಕವಾಗಿ ಪ್ರಸಿದ್ಧಿ ಹೊಂದಿತ್ತು ಮತ್ತು ವೀರರ ನೆಲೆಯಾಗಿತ್ತು ಎಂದು ತಿಳಿದುಬರುತ್ತದೆ ಎನ್ನುತ್ತಾರೆ ಶಾಸನ ತಜ್ಞ ಕೆ. ಧನಪಾಲ್.

ಶಾಸನದ ಪಠ್ಯ :

ಶಾಲಿವಾಹನ ಶಕವರುಷ 1453 ನೇ ಖರ ಸಂವತ್ಸರದ ಆಶ್ವೀಜ ಶುದ್ಧ 13 ಲ್ಲು ಅಂದರೆ ಕ್ರಿ.ಶ. 1531 ರ ಸೆಪ್ಟೆಂಬರ್ 24 ಕ್ಕೆ ಸರಿಹೊಂದುತ್ತದೆ. ಈ ಕಾಲಮಾನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಮಹಾರಾಜಾಧಿರಾಜ, ರಾಜಪರಮೇಶ್ವರ, ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಚತುರ್ಸಮುದ್ರಾಧೀಶ್ವರ ಎಂಬ ಬಿರುದುಗಳನ್ನು ಹೊಂದಿದ ಶ್ರೀ ವೀರಪ್ರತಾಪ ಅಚ್ಯುತಮಹಾರಾಯರು ಆಳುತ್ತಿರಲು ಅವರ ಮಂತ್ರಿಗಳಾದ ರಾವುತ್ತರಾಯ ಮಹಾ ಅಯ್ಯನವರ ಕಾರ್ಯಕ್ಕೆ ಕರ್ತರಾದ ಗರ್ಭಸರು ಮಹಾಪಾತ್ರೆ ಅಯ್ಯನವರು ತಮಗೆ ಉಂಬಳಿಯಾಗಿ ಬಂದ ನಲ್ಲೂರ ಸೀಮೆಗೆ ಸಲುವ ಮುಂಡಿಬಲೆ ಸ್ಥಳಕ್ಕೆ ಸೇರುವ ಬಸವಾಪಟ್ಟಣ ಗ್ರಾಮವನ್ನು ವೇಲೂರ ಭೈರವಗೌಡನ ಮಗ ತಿಮ್ಮಪ್ಪನವರಿಗೆ ಸಂತೆಯನು ಪ್ರಾರಂಭಿಸಲು ಸೂರ್ಯ ಚಂದ್ರರು ಇರುವವರೆಗೂ ಸಲ್ಲಬೇಕೆಂದು ಧಾರಾಪೂರ್ವಕವಾಗಿ ದಾನ ನೀಡಲಾಗಿದೆ. ಇದಕ್ಕೆ ತಪ್ಪಿದವರು ಗಂಗೆಯ ತಟದಲ್ಲಿ ಗೋವು ಮತ್ತು ತಾಯಿ ತಂದೆಯರನು ಕೊಂದ ಪಾಪದಲ್ಲಿ ಹೋಗುವರು ಎಂದು ಶಾಸನದಲ್ಲಿ ಬರೆಯಲಾಗಿದೆ.

ಪೂಜಿಸಲ್ಪಡುವ ಶಾಸನದ ಕಲ್ಲು :

ಕ್ರಿ.ಶ. 1531 ರ ಸೆಪ್ಟೆಂಬರ್ 24 ರ ದಿನಾಂಕವನ್ನು ನಮೂದಿಸಿರುವ ಈ ಶಾಸನದಲ್ಲಿ “ಬಸವಾಪಟ್ಟಣ” ಎಂಬ ಹೆಸರಿರುವುದರಿಂದ ಈ ಗ್ರಾಮ 500 ವರ್ಷಗಳಿಗೂ ಬಹಳ ಹಿಂದಿನದು ಎಂದು ಧಾರಾಳವಾಗಿ ಹೇಳಬಹುದು. ವಿಜಯನಗರದ ಅಚ್ಯುತರಾಯನ ಮಂತ್ರಿ ರಾವುತ್ತರಾಯ ಈ ಭಾಗದ ಒಡೆಯನೆಂದು ಇದರಿಂದ ತಿಳಿಯುವುದರಿಂದ ಆತನ ಹೆಸರೇ ಸಾಸುವರಾಯಸ್ವಾಮಿ ಆಗಿ ಈ ಗ್ರಾಮವನ್ನು ಉಂಬಳಿಯಾಗಿ ಪಡೆದವರಿಂದ ಈ ಕಲ್ಲು ಪೂಜಿಸಲ್ಪಡತೊಡಗಿರಬಹುದು. ಶಾಸನದ ಕಲ್ಲುಗಳು ಐತಿಹಾಸಿಕ ಮಹತ್ವವುಳ್ಳವಾದ್ದರಿಂದ ಅದನ್ನು ಈ ಗ್ರಾಮದಲ್ಲಿ ಪೂಜನೀಯವಾಗಿ ಸಂರಕ್ಷಿಸಿರುವುದು ಮಾದರಿಯಾಗಿದೆ ಎಂದು ಶಾಸನ ತಜ್ಞ ಕೆ. ಧನಪಾಲ್ ವಿವರಿಸಿದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version