Sidlaghatta : “ಭಾರತದ ಸಂವಿಧಾನವು ಸಮಾಜದ ಕಟ್ಟಕಡೆಯ ಪ್ರಜೆಗೂ ಸಮಾನತೆ ಮತ್ತು ಗೌರವದಿಂದ ಬದುಕುವ ಹಕ್ಕನ್ನು ನೀಡಿದೆ. ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗುವುದು ಅತ್ಯಗತ್ಯ,” ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಯುವಶಕ್ತಿಯೇ ದೇಶದ ಭವಿಷ್ಯ: “ಭಾರತವು ಇಂದು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ. ಈ ಕನಸನ್ನು ನನಸು ಮಾಡುವ ಜವಾಬ್ದಾರಿ ಯುವಜನತೆಯ ಮೇಲಿದೆ. ಕೇವಲ ಕನಸು ಕಾಣುವವರಾಗದೆ, ಆ ಕನಸನ್ನು ನನಸು ಮಾಡುವ ಕಾಯಕಯೋಗಿಗಳಾಗಿ ಯುವಶಕ್ತಿ ಬೆಳೆಯಬೇಕು,” ಎಂದು ಅವರು ಕರೆ ನೀಡಿದರು. ಶಿಕ್ಷಕರು ಮಕ್ಕಳಿಗೆ ಸಂವಿಧಾನದ ರಚನೆ ಮತ್ತು ಉದ್ದೇಶಗಳ ಬಗ್ಗೆ ಬಾಲ್ಯದಿಂದಲೇ ಅರಿವು ಮೂಡಿಸಬೇಕು ಎಂದು ಅವರು ಒತ್ತಿ ಹೇಳಿದರು.
ಸರ್ಕಾರಿ ಶಾಲಾ ಸಾಧಕರಿಗೆ 50 ಸಾವಿರ ರೂ. ಬಹುಮಾನ: ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ.ಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ನಡೆದ ಪಥಸಂಚಲನ ಮತ್ತು ಸಾಂಸ್ಕೃತಿಕ ನೃತ್ಯರೂಪಕಗಳು ನೋಡುಗರ ಗಮನ ಸೆಳೆದವು.
ತಹಶೀಲ್ದಾರ್ ಗಗನಸಿಂಧು ಮಾತನಾಡಿ, “ಜಾತ್ಯತೀತ ಮೌಲ್ಯಗಳು ಮತ್ತು ಭ್ರಾತೃತ್ವದ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯೋಣ. ತಾಲ್ಲೂಕು ಆಡಳಿತವು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಒದಗಿಸಲು ಬದ್ಧವಾಗಿದೆ,” ಎಂದರು. ತಾಲ್ಲೂಕು ಪಂಚಾಯಿತಿ ಇಓ ಹೇಮಾವತಿ, ಪೌರಾಯುಕ್ತೆ ಜಿ.ಅಮೃತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.








