Sidlaghatta : ಈ ನಾಡಿನ ಭವಿಷ್ಯದ ಪ್ರಜೆಗಳಾದ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಯುವಜನರು ತಮಗೆ ಜನ್ಮ ನೀಡಿದ ತಾಯಿ ತಂದೆ ಹಾಗೂ ಅಕ್ಷರ ಕಲಿಸಿದ ಗುರುಗಳನ್ನು ಗೌರವಿಸಬೇಕು ಮತ್ತು ಜನ್ಮಭೂಮಿಗೆ ಋಣಿಯಾಗಿರಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕು ರಾಷ್ಟೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ನಗರದಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 79 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಯುವ ಜನರ ಮೇಲೆ ಈ ನಾಡು, ದೇಶದ ಅಭಿವೃದ್ದಿ ಪ್ರಗತಿ ನಿಂತಿದೆ. ನೀವು ಸರಿಯಾದ ದಾರಿಯಲ್ಲಿ ಸಾಗಬೇಕಿದೆ. ಹೆತ್ತವರು, ಅಕ್ಷರ ಕಲಿಸಿದವರಿಗೆ ಗೌರವ ನೀಡಿ ಉತ್ತಮ ಸಂಸ್ಕಾರವಂತರಾಗಿ ದೇಶ ಪ್ರೇಮಿಗಳಾಗಿ ಬೆಳೆಯಬೇಕಿದೆ ಎಂದರು.
ಈ ದೇಶದ 145 ಕೋಟಿ ಜನರು ಸುರಕ್ಷತೆ ಸುಭದ್ರತೆಯ ಭಾವದಿಂದ ಹಾಗೂ ಸೌಹಾರ್ಧತೆಯಿಂದ ನೆಮ್ಮದಿಯ ಬದುಕು ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಸ್ವಾತಂತ್ರ್ಯ ಮತ್ತು ನಮ್ಮ ಸಂವಿಧಾನ ಕಾರಣವಾಗಿದೆ ಎಂದು ನುಡಿದರು.
ಮಹಾತ್ಮಗಾಂಧೀಜಿ, ವಲ್ಲಭಬಾಯಿ ಪಟೇಲರು, ನೇತಾಜಿ ಸುಭಾಷ್ ಚಂದ್ರ ಬೋಸ್, ಲಾಲ್ ಬಹುದ್ದೂರ್ ಶಾಸ್ತ್ರಿಯಂತ ಅನೇಕ ಮಹನೀಯರು, ದೇಶ ಭಕ್ತರು, ದಾರ್ಶನಿಕರು ಸ್ವಾತಂತ್ರ್ಯಕ್ಕಾಗಿ ತನು ಮನ ಧನವನ್ನು ಅರ್ಪಿಸಿ ಹುತಾತ್ಮರಾಗಿದ್ದಾರೆ. ಅವರ ಹೋರಾಟದ ಫಲವಾಗಿ ಬಂದ ಸ್ವಾತಂತ್ರ್ಯವನ್ನು ನಾವು ಅನುಭವಿಸುತ್ತಿರುವ ಈ ಸುಸಮಯದಲ್ಲಿ ಅವರೆಲ್ಲರನ್ನೂ ನಾವು ಸ್ಮರಿಸಬೇಕು ಎಂದು ಹೇಳಿದರು.
ಈ ನಾಡಿನ ಎಲ್ಲರಿಗೂ ಉತ್ತಮ ಆರೋಗ್ಯ ಸವಲತ್ತುಗಳು ಮತ್ತು ಉತ್ತಮ ಶಿಕ್ಷಣ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ, ಜನಪ್ರತಿನಿಗಳು, ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಆಶಿಸಿದರು.
ತಹಶೀಲ್ದಾರ್ ಎನ್.ಗಗನ ಸಿಂಧು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಎಲ್ಲರನ್ನೂ ನಾವು ಸ್ಮರಿಸಬೇಕು, ಸೌಹಾರ್ಧತೆಯಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಸಾಗಬೇಕೆಂದು ನುಡಿದರು.
ನಗರದ ಶಾಲಾ ವಿದ್ಯಾರ್ಥಿಗಳು, ಎನ್‌ಸಿಸಿ ವಿದ್ಯಾರ್ಥಿಗಳ ತಂಡ, ಪೊಲೀಸರು, ಗೃಹ ಇಲಾಖೆ ಸಿಬ್ಬಂದಿಯ ತಂಡ ಧ್ವಜ ವಂದನೆ ಸಲ್ಲಿಸಿದರು.
ವಿಕಲಚೇತನ ಮಕ್ಕಳಿಗೆ ದಿನ ನಿತ್ಯದ ಕಲಿಕೆ, ನಡೆದಾಡಲು ಅನುಕೂಲ ಆಗುವಂತ ಕಲಿಕಾ ಹಾಗೂ ದೈಹಿಕ ಚಟುವಟಿಕೆಗಳ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಲಡ್ಡು ಸಿಹಿ ಹಂಚಲಾಯಿತು.
ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ನಗರಸಭೆ ಆಯುಕ್ತೆ ಜಿ.ಅಮೃತ, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್, ಬಿಇಒ ನರೇಂದ್ರ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಮೇಲೂರು ಮಂಜುನಾಥ್, ಲಕ್ಷ್ಮಣರಾಜು, ಭಕ್ತರಹಳ್ಳಿ ಬೈರೇಗೌಡ ಹಾಜರಿದ್ದರು.







