Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ. ಹನುಮಂತರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರರು ತಪ್ಪದೆ ಹಾಲು ನೀಡುವ ಸೀಮೆ ಹಸುಗಳಿಗೆ ಜೀವ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ರೈತರಿಗೆ ಮನವಿ ಮಾಡಿದರು. ರೈತರು ಶೇ.50ರಷ್ಟು ವಂತಿಗೆಯನ್ನು ಕಟ್ಟಿದರೆ ಉಳಿದ ಮೊತ್ತವನ್ನು ಸಂಘವೇ ಭರಿಸುತ್ತದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸೀಮೆ ಹಸುಗಳ ಬೆಲೆ ಗಗನಕ್ಕೇರಿರುವುದರಿಂದ ಆಕಸ್ಮಿಕವಾಗಿ ಹಸು ಮೃತಪಟ್ಟರೆ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತದೆ. ಆದರೆ ಮೊತ್ತಮೊದಲು ಜೀವ ವಿಮೆ ಮಾಡಿಸಿಕೊಂಡರೆ ಆರ್ಥಿಕ ತೊಂದರೆ ತಪ್ಪಿಸಿಕೊಳ್ಳಬಹುದು ಎಂದರು. ಗುಣಮಟ್ಟದ ಹಾಲನ್ನು ಉತ್ಪಾದಿಸಿ ಪೂರೈಸಿದರೆ ರೈತರಿಗೆ ಉತ್ತಮ ಬೆಲೆ ಹಾಗೂ ಡೈರಿಗೂ ಹೆಚ್ಚಿನ ಆದಾಯ ದೊರೆತೀತು ಎಂದು ಅವರು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ನಿರ್ದೇಶಕ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಮ್ಮ, ಸದಸ್ಯೆ ಗಂಗರತ್ಮಮ್ಮ, ದ್ಯಾವಪ್ಪ, ನಿರ್ದೇಶಕರಾದ ನಾಗವೇಣಿ, ಚನ್ನಕೇಶವ, ಗೋಪಲಪ್ಪ, ವೇಣುಗೋಪಾಲರೆಡ್ಡಿ, ಮನೋಜ್, ಶ್ರೀನಿವಾಸ್, ಯಶೋದಮ್ಮ, ಕೋಮಲ, ಅಂಬರೀಷ್, ನಾಗರಾಜ್, ಪ್ರಭಾರ ಕಾರ್ಯದರ್ಶಿ ಅಪ್ಪಾಜಿಗೌಡ ಸೇರಿದಂತೆ ಸಂಘದ ಎಲ್ಲಾ ಷೇರುದಾರರು ಉಪಸ್ಥಿತರಿದ್ದರು.