Appegowdanahalli, Sidlaghatta : ಕರ್ನಾಟಕ ಇತಿಹಾಸ ಅಕಾಡೆಮಿಯು ಕರ್ನಾಟಕದ ಐತಿಹಾಸಿಕ ಪರಂಪರೆಯನ್ನು ಉಳಿಸಲು, ಸಂರಕ್ಷಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. ವಿವಿಧ ಕಾರ್ಯಕ್ರಮಗಳಾದ ಐತಿಹಾಸಿಕ ಪರಂಪರೆ ಉಳಿಸಿ, ಶಾಸನಗಳ ಸಂರಕ್ಷಣೆ, ವೀರಗಲ್ಲುಗಳ ಅಧ್ಯಯನ, ಮತ್ತು ಸಂಶೋಧನಾತ್ಮಕ ಪ್ರಕಟಣೆಗಳ ಮೂಲಕ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಕಾರ್ಯದರ್ಶಿ ಕೆ. ಧನಪಾಲ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅವರು ವಿದ್ಯಾರ್ಥಿಗಳಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ದೊರೆತಿರುವ ಶಾಸನಗಳು, ವೀರಗಲ್ಲುಗಳು ಹಾಗೂ ಅದರಿಂದ ತಿಳಿದುಬರುವ ಇತಿಹಾಸದ ಬಗ್ಗೆ ಸ್ಲೈಡ್ ಶೋ ಮೂಲಕ ಪ್ರದರ್ಶಿಸಿ ವಿವರಿಸಿದರು.
ಇತಿಹಾಸ ಪ್ರಜ್ಞೆ ಇಲ್ಲದಿದ್ದರೆ ನಾವು ಅಸ್ತಿತ್ವ ಕಳೆದುಕೊಂಡಂತೆ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ವೀರಗಲ್ಲುಗಳು, ಮಾಸ್ತಿ ಕಲ್ಲುಗಳು, ಮತ್ತು ಶಿಲ್ಪಗಳ ಬಗ್ಗೆ ಮಾಹಿತಿ ನೀಡಿದರು. ಶಾಸನಗಳ ಅಧ್ಯಯನ ನಡೆದು ಬಂದ ಹಾದಿ, ಈಗಿನ ಪುರಾತತ್ವ ಇಲಾಖೆಯಿಂದ ನಡೆದ ಗ್ರಾಮಾವಾರು ಸರ್ವೆ ಕಾಲದಲ್ಲಿ ಸಿಕ್ಕ ಹೊಸ ಶಾಸನಗಳು ಬೆಳಕು ಬೀರುವ ಇತಿಹಾಸದ ಸಂಗತಿಗಳನ್ನೆಲ್ಲಾ ವಿವರಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ಕೂಡ ನಡೆಯಿತು.
ಕರ್ನಾಟಕ ಇತಿಹಾಸ ಅಕಾಡೆಮಿಯು ಹೊರತಂದಿರುವ ಇತಿಹಾಸ ದರ್ಶನ ಕೃತಿಯನ್ನು ಶಾಲೆಯ ಗ್ರಂಥಾಲಯಕ್ಕೆ ನೀಡಲಾಯಿತು.
ಶಾಸನತಜ್ಞ ಎ.ಎಂ.ತ್ಯಾಗರಾಜ್, ಪ್ರಾಂಶುಪಾಲೆ ಎಸ್.ವಿ.ವಿಜಯಶ್ರೀ, ಶಿಕ್ಷಕರಾದ ಡಿ.ಪಿ.ಮುರಳೀಧರ್, ಎಸ್.ಎ.ಪ್ರಸಾದ, ಶಶಿ ದೀಪಿಕಾ, ಯಲ್ಲಪ್ಪ ಗಡ್ಡನಕೇರಿ, ರಾಮಪ್ಪ, ತ್ರಿವೇಣಿ, ಜಿ.ಎನ್.ನರೇಶ್, ಲಕ್ಷ್ಮೀನಾರಾಯಣ, ಸಿದ್ದು ಹುಣಸಿಕಟ್ಟಿ, ಸಂಧ್ಯಾ ಹಾಜರಿದ್ದರು.








