Appegowdanahalli, Sidlaghatta : ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಮತ್ತು ಕುರಿ ಮೇಕೆ ಸಾಕಣೆಯಿಂದ ಬದುಕನ್ನು ಕಟ್ಟಿಕೊಳ್ಳಬಹುದು. ರೇಷ್ಮೆ ಕೃಷಿ ಮತ್ತು ಸಾಮಾನ್ಯ ಕೃಷಿಯೊಂದಿಗೆ ಕುರಿ ಮೇಕೆ ಸಾಕಣೆಯನ್ನು ಕೈಗೊಳ್ಳುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪೇಗೌಡನಹಳ್ಳಿ ಲಕ್ಷ್ಮಿನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ವಾಸಿಯಾದ ತಾ.ಪಂ.ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ ಅವರು ತಮ್ಮ ತಾಯಿ ಸರೋಜಮ್ಮ ನೆನಪಿನಲ್ಲಿ ಗ್ರಾಮದ 100 ಕುಟುಂಬಗಳಿಗೆ ಒಂದು ಹೆಣ್ಣು ಒಂದು ಗಂಡು ಕುರಿ ತಲಾ 2 ಕುರಿಗಳಂತೆ 200 ಕುರಿಗಳನ್ನು ವಿತರಿಸಿ ಮಾತನಾಡಿದರು.
ಗ್ರಾಮದಲ್ಲಿ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿವೆ. ಕೆಲಸ ಹುಡುಕಿಕೊಂಡು ಬೇರೆ ಬೇರೆ ಊರುಗಳಿಗೆ ಹಲವರು ಹೋಗುತ್ತಾರೆ. ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳ ನಡುವೆ ಮನೆ ಬಳಿ ಒಂದೆರಡು ಕುರಿ ಮೇಕೆಗಳನ್ನು ಕಟ್ಟಿ ಹಾಕಿ ಮೇಯಿಸುವುದರಿಂದ ಆರ್ಥಿಕವಾಗಿ ಒಂದಷ್ಟು ಸುಧಾರಣೆ ಕಾಣಬಹುದು ಎಂದರು.
ಹಾಗಾಗಿ ನಮ್ಮ ತಾಯಿಯ ನೆನಪಿನಲ್ಲಿ 100 ಕುಟುಂಬಗಳಿಗೆ ತಲಾ 2 ರಂತೆ 200 ಕುರಿಗಳನ್ನು ನೀಡುತ್ತಿದ್ದು ಸಾಕಣೆ ಮಾಡಿ ಅದರಿಂದ ಸಿಗುವ ಆದಾಯವನ್ನು ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಬಳಸಿಕೊಳ್ಳಿ, ವೃಥಾ ಖರ್ಚು ಮಾಡಬೇಡಿ ಎಂದು ಮನವಿ ಮಾಡಿದರು.
ಗ್ರಾಮದ 100 ದಲಿತ ಕುಟುಂಬಗಳಿಗೆ ತಲಾ 2 ಕುರಿಗಳನ್ನು ವಿತರಿಸಲಾಯಿತು. ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಎ.ಎಂ.ತ್ಯಾಗರಾಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಮ್ಮ, ಸದಸ್ಯೆ ಗಂಗರತ್ನಮುನೀಂದ್ರ, ದ್ಯಾವಪ್ಪ, ಮುನಿರೆಡ್ಡಿ, ಎಂಪಿಸಿಎಸ್‌ನ ಕೇಶವಮೂರ್ತಿ, ದಾಸಪ್ಪ, ಮುನಿರಾಜು, ವೆಂಕಟೇಶ್, ದೇವರಾಜ್ ಹಾಜರಿದ್ದರು.