Appegowdanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯ ಆವರಣದಲ್ಲಿ 2025-26 ನೇ ಸಾಲಿನ ಅಂತರ್ ಸದನ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿತ್ತು.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ, ಕಬ್ಬಡ್ಡಿ, ಖೊ-ಖೊ, ವಾಲಿಬಾಲ್, ಥ್ರೋಬಾಲ್, ಭರ್ಜಿ ಎಸೆತ, ಜಾವೆಲಿನ್ ಎಸೆತ, ಓಟದ ಸ್ಪರ್ಧೆ, ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು. ಶಾಲೆಯ ವಿದ್ಯಾರ್ಥಿಗಳು, ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾವೇರಿ, ತುಂಗಾ, ಭದ್ರಾ, ಶರಾವತಿ, ಹೆಸರಿನಲ್ಲಿ ತಂಡಗಳನ್ನು ರಚನೆ ಮಾಡಿಕೊಂಡಿದ್ದರು.
ಈ ವೇಳೆ ಪ್ರಾಂಶುಪಾಲೆ ವಿಜಯಶ್ರೀ ಮಾತನಾಡಿ, ಕ್ರೀಡೆಗಳು, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವುದಲ್ಲದೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಒತ್ತಡದ ಸಮಯವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಕ್ರೀಡೆಗಳಿಂದ ಕಲಿತುಕೊಳ್ಳಬಹುದು. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಾಗುವುದಿಲ್ಲ. ಭಾಗವಹಿಸುವಿಕೆ ಬಹಳ ಮುಖ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಶಾಲಾ ಹಂತದಿಂದಲೇ ಕ್ರೀಡಾಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು. ಎದುರಾಳಿಗಳು ಎಷ್ಟು ಬಲಿಷ್ಟರಾಗಿದ್ದಾರೆ ಎನ್ನುವುದಕ್ಕಿಂತ ಎದುರಾಳಿ ಆಟಗಾರರನ್ನು ಸೋಲಿಸುವುದಕ್ಕಾಗಿ ನಿಮ್ಮಲ್ಲಿ ಯಾವ ರೀತಿಯಾದ ತಂತ್ರಗಳನ್ನು ಎಣೆಯುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಶಿಕ್ಷಕ ಎಸ್.ಎ.ಪ್ರಸಾದ್ ಮಾತನಾಡಿ, ಕ್ರೀಡೆಗಳು ಪಠ್ಯಚಟುವಟಿಕೆಗಳ ಒಂದು ಭಾಗವಾಗಿದೆ. ಬಹಳಷ್ಟು ಮಂದಿ, ಶೈಕ್ಷಣಿಕವಾಗಿ ಹಿಂದುಳಿದರೂ ಕ್ರೀಡಾ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಉದ್ಯೋಗಕ್ಕೆ ಹೋಗುವಾಗಲೂ ಕ್ರೀಡಾಪಟುಗಳಾಗಿದ್ದರೆ, ಹೆಚ್ಚು ಅವಕಾಶಗಳು, ವಿನಾಯಿತಿ ಸಿಗುತ್ತದೆ. ಕ್ರೀಡೆಯನ್ನು ಬದ್ಧತೆ, ಗೌರವದಿಂದ ಆಡಬೇಕು. ದ್ವೇಷ, ಅಸೂಯೆ, ಇಟ್ಟುಕೊಂಡು ಕ್ರೀಡೆ ಆಡಬಾರದು. ಸಮರ್ಪಣಾ ಮನೋಭಾವನೆ ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿ, ಒಬ್ಬ ಕ್ರೀಡಾಪಟುವಾಗಿ ಆಡುವುದನ್ನುಅಭ್ಯಾಸ ಮಾಡಿಕೊಳ್ಳಬೇಕು. ತೀರ್ಪುಗಾರರು ನೀಡುವ ತೀರ್ಪುಗಳನ್ನು ಸ್ವಾಗತಿಸಬೇಕು. ಒಂದು ಬಾರಿ ಸೋತರೂ, ಅನೇಕ ಗೆಲುವುಗಳಿಗೆ ಅದು ನಾಂದಿಯಾಗುತ್ತದೆ ಎಂದರು.
ಶಿಕ್ಷಕರಾದ ಶಶಿದೀಪಿಕಾ, ದೀವಾಕರರೆಡ್ಡಿ.ಸಿ.ಜಿ, ರಾಮಪ್ಪಸಿದ್ದಪ್ಪ, ಯಲ್ಲಪ್ಪ, ಲಕ್ಷ್ಮೀನಾರಾಯಣ, ತ್ರಿವೇಣಿ, ಸಂದ್ಯಾ, ಸಿದ್ಧು ಹಾಜರಿದ್ದರು.