Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಹಾಗೂ ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಷನ್ನ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ವೃತ್ತಿ ಯೋಜನೆ ಕಾರ್ಯಕ್ರಮದಡಿ ತರಬೇತಿ ಕಾರ್ಯಾಗಾರ ನಡೆಯಿತು.
ಜಿಲ್ಲೆಯ ವಿವಿಧ ವಸತಿ ಶಾಲೆಗಳಿಂದ ಸುಮಾರು ೫೦ ಕ್ಕೂ ಹೆಚ್ಚು ಮಂದಿ ಶಿಕ್ಷಕರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಅನಾಹತ ಯುನೈಟೆಡ್ ಎಫರ್ಟ್ಸ್ ಫೌಂಡೇಷನ್ ಮುಖ್ಯಸ್ಥ ಡಾ.ಶರವಣ ಮಾತನಾಡಿ, ವಸತಿ ಶಾಲೆಗಳಲ್ಲಿ, ಮಕ್ಕಳಿಗೆ ಪಠ್ಯಪುಸ್ತಕಗಳಲ್ಲಿನ ಪಾಠಪ್ರವಚನಗಳ ಜೊತೆಯಲ್ಲೆ, ಕೌಶಲ್ಯಾಧಾರಿತ ಶಿಕ್ಷಣದ ಬಗ್ಗೆಯೂ ಶಿಕ್ಷಕರು ಹೆಚ್ಚು ಒತ್ತುಕೊಡಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯು, ತನ್ನ ಜೀವನದಲ್ಲಿ ಏನಾದರೂ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಹೇಗೆ ಯಶಸ್ಸು ಕಾಣಬಹುದು ಎಂಬುದನ್ನು ಕಲಿಸಿಕೊಡುವುದರ ಜೊತೆಗೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಗೆ ತರುವುದು, ಅವರು, ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿಯುಳ್ಳವರಾಗಿದ್ದಾರೆ ಎನ್ನುವ ಕುರಿತು, ಗುರ್ತಿಸಿ, ಅವರನ್ನು ಪ್ರೋತ್ಸಾಹಿಸಿದರೆ, ಶಿಕ್ಷಣದ ನಂತರದಲ್ಲಿ, ಅವರು ಸರ್ಕಾರಿ ಉದ್ಯೋಗದ ಮೇಲಷ್ಟೇ ಅವಲಂಬಿತರಾಗದೆ ಜೀವನದಲ್ಲಿ ಸ್ವಂತ ಉದ್ಯೋಗವನ್ನು ಮಾಡಿಕೊಂಡು, ಜೀವನ ನಡೆಸಲಿದ್ದಾರೆ. ಶಿಕ್ಷಕರು, ತರಬೇತಿಯಲ್ಲಿ ಕಲಿತಿರುವಂತಹ ಎಲ್ಲಾ ವಿಚಾರಗಳನ್ನು ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಬೆಂಗಳೂರು ವಿಭಾಗದ ವಿಜನ್ ಇಂಪ್ಯಾಕ್ಟ್ ವ್ಯವಸ್ಥಾಪಕ ರಾಘವೇಂದ್ರ ಪ್ರಸಾದ್ ಮಾತನಾಡಿ, ಶಾಲಾ ಹಂತದಲ್ಲೆ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಕೌಶಲ್ಯಾಧಾರಿತ ತರಬೇತಿಯನ್ನು ನೀಡುವುದರಿಂದ, ಮಕ್ಕಳಲ್ಲಿ ಇನ್ನಷ್ಟು ಭರವಸೆಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಇಂತಹ ತರಬೇತಿ ಕಾರ್ಯಾಗಾರಗಳಿಂದ ಬಹಳಷ್ಟು ಮಂದಿ ವಿದ್ಯಾರ್ಥಿಗಳು ಜೀವನ ರೂಪಿಸಿಕೊಂಡಿದ್ದಾರೆ. ಶಿಕ್ಷಕರು, ಬದ್ಧತೆಯಿಂದ ವಿದ್ಯಾರ್ಥಿಗಳನ್ನು ತಯಾರು ಮಾಡುವಂತಹ ಕಾರ್ಯವನ್ನು ಮಾಡಬೇಕು ಎಂದರು.
ಚಿಕ್ಕಬಳ್ಳಾಪುರ ನಿರ್ವಹಣಾ ತಂಡದ ಮುಖ್ಯಸ್ಥ ಶ್ರೀನಿವಾಸ್, ತುಮಕೂರು ಜಿಲ್ಲೆ ನಿರ್ವಹಣಾ ತಂಡದ ಮುಖ್ಯಸ್ಥ ನಿಂಗಪ್ಪ, ಕಂಟೆಂಟ್ ಮೆಹರಿನ್ ಫಾತಿಮಾ, ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲೆ ವಿಜಯಶ್ರೀ, ಶಿಕ್ಷಕ ಎಸ್.ಎ.ಪ್ರಸಾದ್ ಮತ್ತಿತರರು ಹಾಜರಿದ್ದರು.