Sidlaghatta : ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿ ಗ್ರಾಮದಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ, ಎಲ್ಲಾ ತಾಲ್ಲೂಕುಗಳ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೊರಡಿಸಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾಹಿತಿ ನೀಡಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈವರೆಗೆ ಹಕ್ಕಿಜ್ವರ ಸಂಬಂಧಿತ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಆದಾಗ್ಯೂ, ಮುನ್ನೆಚ್ಚರಿಕಾ ಕ್ರಮವಾಗಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೋಳಿ ಸಾಕಾಣಿಕಾ ಕೇಂದ್ರಗಳಲ್ಲಿ ಯಾವುದೇ ಅಸಹಜ ಸಾವುಗಳು ಕಂಡುಬಂದಲ್ಲಿ ತಕ್ಷಣ ಅಧಿಸೂಚನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ, ಸೋಂಕು ಹರಡದಂತೆ ಆ ಪ್ರದೇಶದಲ್ಲಿ ತಕ್ಷಣ ತ್ಯಾಜ್ಯ ನಿರ್ವಹಣೆ ಮತ್ತು ಸೋಂಕು ನಿವಾರಕ ಕ್ರಮಗಳನ್ನು ಜಾರಿಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ.
ಹಕ್ಕಿಜ್ವರ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ:
ಹಕ್ಕಿಜ್ವರದ ಸೋಂಕಿತರಿಗೆ ಜ್ವರ, ಕೆಮ್ಮು, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯು ನೋವು, ಅಪಾರ ಆಯಾಸ, ವಾಂತಿ, ಭೇದಿ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಕಂಡುಬಂದ ಕೂಡಲೇ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರಸ್ತುತ ಹಕ್ಕಿಜ್ವರದ ಯಾವುದೇ ಆತಂಕವಿಲ್ಲ, ಆದರೂ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಜನತೆ ಭಯಪಡುವ ಅಗತ್ಯವಿಲ್ಲ ಎಂದು ಡಾ.ವೆಂಕಟೇಶಮೂರ್ತಿ ಹೇಳಿದರು.