Bashettahalli, Sidlaghatta : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಾಗೂ ರಾಜಕೀಯ ವಾಗ್ವಾದಕ್ಕೂ ಕಾರಣವಾದ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ತಾಲ್ಲೂಕಿನಲ್ಲಿ ಆರಂಭವಾದರೂ, ತಾಂತ್ರಿಕ ಸಮಸ್ಯೆಗಳು, ಮಾಹಿತಿ ಕೊರತೆ ಮತ್ತು ಸೂಕ್ತ ಮಾರ್ಗದರ್ಶನದ ಅಭಾವದಿಂದ ಗಣತಿ ಕಾರ್ಯ ಗೊಂದಲಕ್ಕೆ ಒಳಪಟ್ಟಿದೆ.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಗಣತಿ ನಡೆಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ 550 ಶಿಕ್ಷಕರನ್ನು ಗಣತಿದಾರರಾಗಿ ನೇಮಕ ಮಾಡಿ, ಅವರಿಗೆ ಎರಡು ದಿನಗಳ ತರಬೇತಿ ನೀಡಲಾಗಿತ್ತು. ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನೂ ರಚಿಸಲಾಗಿತ್ತು.
ಆದರೆ ಗಣತಿದಾರರಿಗೆ ಬಳಸಬೇಕಾದ ಮೊಬೈಲ್ ಆಪ್ ಲಭ್ಯವಾಗದೆ, ಅಗತ್ಯ ಮಾಹಿತಿಯೂ ಸಮಯಕ್ಕೆ ತಲುಪದ ಕಾರಣ ಗೊಂದಲ ಉಂಟಾಯಿತು. ಹೀಗಾಗಿ ಹಲವರು ಸಮೀಕ್ಷೆ ಪ್ರಾರಂಭಿಸದೆ ತಟಸ್ಥರಾಗಿದ್ದರು. ಜೊತೆಗೆ, ಸಮೀಕ್ಷೆಯನ್ನು ರದ್ದುಪಡಿಸಲು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತ ಯಾಚಿಕೆ ವಿಚಾರಣೆ ಸೆಪ್ಟೆಂಬರ್ 23ಕ್ಕೆ ಮುಂದೂಡಲ್ಪಟ್ಟಿದ್ದರಿಂದ, ಗಣತಿ ಮುಂದುವರಿಯುತ್ತದೆಯೋ ನಿಲ್ಲುತ್ತದೆಯೋ ಎಂಬ ಅನುಮಾನ ಪರಿಸ್ಥಿತಿ ನಿರ್ಮಾಣವಾಯಿತು.
ಇದಕ್ಕೂ ಮೊದಲು, ವಿವಿಧ ಸಮುದಾಯಗಳು ಸಮೀಕ್ಷೆಯ ವೇಳೆ ಧರ್ಮ, ಜಾತಿ ಹಾಗೂ ಕುಲ-ಕಸುಬು ಕಾಲಂಗಳಲ್ಲಿ ಏನು ನಮೂದಿಸಬೇಕೆಂಬ ಬಗ್ಗೆ ವಾರದಿಂದ ಜಾಗೃತಿ ಅಭಿಯಾನ ನಡೆಸುತ್ತಿದ್ದರು. ಮನೆಮನೆಗೆ ಸಮೀಕ್ಷೆಯ ಸ್ಟಿಕ್ಕರ್‌ಗಳನ್ನೂ ಅಂಟಿಸಲಾಗಿತ್ತು.
ಆದರೆ, ಸೆಪ್ಟೆಂಬರ್ 22ರಂದು ಯಾವುದೇ ಗಣತಿದಾರರು ಮನೆಗಳಿಗೆ ಭೇಟಿ ನೀಡದೇ, ಸಮೀಕ್ಷಾ ಕಾರ್ಯವೇ ನಡೆಯದಂತಾಗಿತ್ತು. ಇದರಿಂದ ಸಾರ್ವಜನಿಕರಲ್ಲಿ “ಸಮೀಕ್ಷೆ ನಿಜವಾಗಿಯೂ ನಡೆಯುತ್ತದೆಯೋ?” ಎಂಬ ಅನುಮಾನ ಮತ್ತು ಗೊಂದಲ ವಾತಾವರಣ ಉಂಟಾಯಿತು.
ತಾಲ್ಲೂಕಿನ ಬಶೆಟ್ಟಹಳ್ಳಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಹಶೀಲ್ದಾರ್ ಗಗನ ಸಿಂಧು ಅವರು ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನಿಂದ ಅ.7ರವರೆಗೂ ಸಮೀಕ್ಷೆ ನಡೆಯಲಿದೆ. ಪ್ರತಿ ಮನೆಯ ಸಮೀಕ್ಷೆಗೆ ಸುಮಾರು 45 ನಿಮಿಷಗಳ ಸಮಯ ಹಿಡಿಯಲಿದೆ. ಗಣತಿದಾರರು ಮನೆ ಬಳಿ ಬಂದಾಗ ಪಡಿತರ ಚೀಟಿ, ಆಧಾರ್ ಕಾರ್ಡ್, ಓಟರ್ ಐಡಿ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಕಡ್ಡಾಯವಾಗಿ ಇರಬೇಕು. ದಾಖಲೆಗಳನ್ನು ಒದಗಿಸಿ ಮಾಹಿತಿ ನೀಡಲು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಬಿಇಒ ನರೇಂದ್ರ ಕುಮಾರ್, ಬಿಸಿಎಂ ಇಲಾಖೆ ಅಧಿಕಾರಿ ನವೀನ್ ಕುಮಾರ್, ಗಣತಿದಾರರು ಹಾಜರಿದ್ದರು.