Bhaktarahalli, Sidlaghatta : ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗಷ್ಟೇ ಸೀಮಿತವಾಗದೆ, ಸಾಮಾಜಿಕ ಕಳಕಳಿ ಮತ್ತು ಸೌಹಾರ್ದತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ವಿದ್ಯಾರ್ಥಿ ದೆಸೆಯಿಂದಲೇ ಸಿದ್ಧರಾಗಬೇಕು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಡೆಪ್ಯೂಟಿ ಛೇರ್ಮನ್ ಹಾಗೂ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ. ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರ ಸೇವಾ ದಳದ 8 ದಿನಗಳ ವಸತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ದೇಶಪ್ರೇಮದ ಜೊತೆಗೆ ಎಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಂಡು, ಜಾತಿ-ಮತದ ಭೇದಗಳನ್ನು ಮರೆತು ಮಾನವೀಯತೆಯಿಂದ ಬದುಕಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ. ಶಾಲಾ ಹಂತದಿಂದಲೇ “ನಾವೆಲ್ಲರೂ ಮೊದಲು ಭಾರತೀಯರು” ಎಂಬ ವಿಶಾಲ ಮನೋಭಾವ ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
ತಹಶೀಲ್ದಾರ್ ಗಗನಸಿಂಧು ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಕ್ರೀಡೆ, ಕಲೆ, ಸಂಗೀತ ಮತ್ತು ಸಾಮಾಜಿಕ ಸೇವೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ, ಟೀಮ್‌ವರ್ಕ್, ಶಿಸ್ತು, ಮತ್ತು ಸೃಜನಶೀಲತೆ ಹೆಚ್ಚುತ್ತದೆ. ಇವು ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ, ಜೊತೆಗೆ ಸುಪ್ತ ಪ್ರತಿಭೆಗಳನ್ನು ಹೊರತರುತ್ತವೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ, ಬಿ.ಎಂ.ವಿ ಶಾಲೆಯ ಹಿರಿಯ ವಿದ್ಯಾರ್ಥಿ ನಾಗರಾಜ್ ಅವರು ತನ್ನ ತಂದೆ ರಂಗಭೂಮಿ ಕಲಾವಿದ ಮುನಿಯಪ್ಪ ಅವರ ಸ್ಮರಣಾರ್ಥ ನಿರ್ಮಿಸಿಕೊಟ್ಟ ಬಯಲು ರಂಗಭೂಮಿ ಸ್ಟೀಲ್ ಛಾವಣಿಯನ್ನು ಉದ್ಘಾಟಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಬಿ.ಎಂ.ವಿ. ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್.ಕಾಳಪ್ಪ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಿಶ್ರಾಂತ ಉಪಕುಲಪತಿ ಡಾ.ಎ.ಮುರಿಗೆಪ್ಪ, ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರ ಶೆಟ್ಟಿ, ಪ್ರೊ.ಹನುಮಂತ, ಜಿ.ವಿ.ಸುಂದರ್, ತೋಟಗಾರಿಕಾ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಸಂತೆ ನಾರಾಯಣಸ್ವಾಮಿ, ಚಿದಾನಂದಮೂರ್ತಿ, ಕ್ಯಾಂಪ್ ತರಬೇತುದಾರರಾದ ಬಾಬಾ ಸಾಹೇಬ್ ನಡಾಫ್, ಚಂದನ್ ಮಾತುಂಗೆ, ಸಾಗರ್ ಪಾಟೀಲ್, ಬಿಷ್ಣ ತಾಪ ಹಾಗೂ ಗ್ರಾಂಅದ ಮುಖಂಡರು, ಶಿಬಿರಾರ್ಥಿಗಳು ಹಾಜರಿದ್ದರು.








