Sidlaghatta : ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿದೆ. ಹಣಕಾಸಿನ ತೊಂದರೆಯಿಂದ ಅನೇಕ ಯೋಜನೆಗಳು ಮತ್ತು ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು BJP ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆರೋಪಿಸಿದರು.
ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ಥಿಕ ತಜ್ಞ, ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಿಎಂ ಎಂದೆಲ್ಲಾ ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಅವರೇ ಘೋಷಿಸಿದ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ಹೆಣಗಾಡುತ್ತಿದ್ದಾರೆ ಎಂದರು.
ಬೀದಿ ಬದಿಯ ಸಣ್ಣ ಪುಟ್ಟ ವ್ಯಾಪಾರಿಗಳಿಂದ ಹಿಡಿದು ಯಾರನ್ನೂ ಕೂಡ ಬಿಡದೆ ಎಲ್ಲ ರೀತಿಯ ಸುಂಕ, ಕಂದಾಯ, ತೆರಿಗೆ ಹಾಕಿ ಜನ ಸಾಮಾನ್ಯರ ಬದುಕನ್ನು ನರಕವಾಗಿಸುತ್ತಿದ್ದಾರೆ. ಇದರಿಂದ ದಿನ ನಿತ್ಯ ಬಳಕೆಯ ಸರಕುಗಳ ಬೆಲೆ ಹೆಚ್ಚಿದ್ದು ಬದುಕು ನಡೆಸಲು ಜನ ಸಾಮಾನ್ಯರು ಕಷ್ಟಪಡುವಂತಾಗಿದೆ ಎಂದರು.
ಕೇವಲ ಪೋನ್ ಪೇ ಆಧಾರದಲ್ಲಿ ರಾಜ್ಯದ ಲಕ್ಷಾಂತರ ಬೀದಿ ಬದಿಯ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ಇಲಾಖೆ ಮೂಲಕ ನೊಟೀಸ್ ಕೊಡಿಸಿ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳ ತೆರಿಗೆ ಕಟ್ಟುವಂತೆ ಸೂಚಿಸಿದ್ದು ವ್ಯಾಪಾರಿಗಳು ಲಕ್ಷ ಲಕ್ಷ, ಕೋಟಿ ಕೋಟಿ ತೆರಿಗೆ ನೊಟೀಸ್ ನೋಡಿ ಕಂಗಾಲಾಗಿದ್ದಾರೆ ಎಂದು ದೂರಿದರು.
ಪಂಚ ಗ್ಯಾರಂಟಿಗಳಿಗೆ ಮನಸೋತು ಮತ ಕೊಟ್ಟು ಅಧಿಕಾರಕ್ಕೆ ತಂದಿದ್ದಕ್ಕೆ ಇದೀಗ ರಾಜ್ಯದ ಮತದಾರರು ಕಾಂಗ್ರೆಸ್ ಸರ್ಕಾರದ ವಿರುದ್ದ ಶಾಪ ಹಾಕತೊಡಗಿದ್ದಾರೆ ಎಂದು ವ್ಯಂಗ್ಯವಾಡಿದರು.
ತೆರಿಗೆ ಕಟ್ಟುವಂತೆ ನೀಡಿರುವ ನೊಟೀಸ್ ಗೆ ಯಾರು ಕೂಡ ಹೆದರುವ ಅಗತ್ಯವಿಲ್ಲ, ನಿಮ್ಮೊಂದಿಗೆ ನಮ್ಮ ಬಿಜೆಪಿ ಪಕ್ಷವಿದ್ದು ನಿಮ್ಮೆಲ್ಲರ ನೆರವಿಗೆ ಸಹಾಯವಾಣಿ 8884245123 ಗೆ ಕರೆ ಮಾಡಿ ಎಂದು ಅವರು ನಾಗರಿಕರಲ್ಲಿ ಮನವಿ ಮಾಡಿದರು.
ರಾಜ್ಯದ ಉದ್ದಗಲಕ್ಕೂ ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ದ ತೀವ್ರ ಹೋರಾಟ ನಡೆಸಲು ಬಿಜೆಪಿ ರಾಜ್ಯ ಘಟಕ ತೀರ್ಮಾನಿಸಿದೆ. ನಿಮ್ಮೊಂದಿಗೆ ನಾವಿದ್ದೇವೆ, ಹೆದರಬೇಡಿ ಎಂದು ತಿಳಿಸಿದರು.