
Sidlaghatta : ಈ ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ಹಾಗೂ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಾಮರಸ್ಯವನ್ನು ಹಾಳು ಮಾಡುವವರು ಯಾರೇ ಆಗಿರಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವವರಿಗೆ ಎಚ್ಚರಿಕೆ ಸಂದೇಶ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಒತ್ತಾಯಿಸಿದರು.
ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಭಾರತ ಹಿಂದೂ ರಾಷ್ಟ್ರವಾದರೂ ಇಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಇನ್ನಿತರೆ ಎಲ್ಲ ಧರ್ಮದವರೂ ಸಾಮರಸ್ಯದಿಂದ ಕೂಡಿ ಬಾಳುತ್ತಿದ್ದು ನಮ್ಮ ನಮ್ಮ ನಡುವೆ ವಿಷ ಬೀಜ ಬಿತ್ತುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ದಕ್ಷಿಣ ಭಾರತದಲ್ಲೇ ಧರ್ಮಸ್ಥಳ ಕ್ಷೇತ್ರವು ಹಿಂದೂಗಳ ಪಾಲಿಗೆ ಪವಿತ್ರವಾದ ಧಾರ್ಮಿಕ ಕೇಂದ್ರವಾಗಿದೆ. ಧರ್ಮಸ್ಥಳದ ಪವಿತ್ರತೆ, ಹಾಗೂ ಪ್ರಸಿದ್ದಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಕೆಲವರು ಷಡ್ಯಂತ್ರ ರೂಪಿಸಿದ್ದು ಬುರುಡೆ ನಾಟಕ ಆಡಿದ್ದಾರೆ. ಸಮೀರ್ ಎಂಬಾತ ಯೂಟ್ಯೂಬ್ ಮೂಲಕ ಇಲ್ಲ ಸಲ್ಲದ ವಿಡಿಯೋಗಳನ್ನು ಹರಿಬಿಟ್ಟು ಧರ್ಮಸ್ಥಳದ ವಿರುದ್ದ ಪ್ರಚೋದನೆ ಮಾಡಿದ್ದಾನೆ.
ರಾಜ್ಯ ಸರ್ಕಾರವು ಬುರುಡೆ ಬಿಟ್ಟ ಚನ್ನಯ್ಯ, ಯೂಟ್ಯೂಬ್ ಸಮೀರ್ ನ ಹಿನ್ನಲೆಯನ್ನು ತನಿಖೆ ಮಾಡಿ ಮಂಪರು ಪರೀಕ್ಷೆ ಮೂಲಕ ಅವರ ಹಿನ್ನಲೆ ಅರಿತು ಸತ್ಯಾಸತ್ಯತೆ ತಿಳಿದ ನಂತರ ತನಿಖೆಗೆ ಇಳಿಯಬೇಕಿತ್ತು. ಆದರೆ ಅದು ಬಿಟ್ಟು ಸರ್ಕಾರವು ಕೂಡ ಆತುರ ಪಟ್ಟು ಅಸಂಖ್ಯಾತ ಭಕ್ತರ ಮನಸಿಗೆ ನೋವಾಗುವಂತೆ ಮಾಡಿದೆ ಎಂದು ಬೇಸರ ಹೊರ ಹಾಕಿದರು.
ಧರ್ಮಸ್ಥಳ ದೇವಾಲಯದ ವಿರುದ್ದ ನಡೆದಿರುವ ಷಡ್ಯಂತ್ರದ ಹಿಂದೆ ಕೇರಳ, ವಿದೇಶದ ಕೆಲವರು ನೆರಳು ಇದ್ದು, ಹಣದ ವಹಿವಾಟು ಕೂಡ ನಡೆದಿದೆ. ಎಸ್.ಐ.ಟಿಯಿಂದ ತನಿಖೆ ಪರಿಪೂರ್ಣವಾಗದು ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಅಂಟಿದ ಕಳಂಕವೂ ಹೋಗದು ಎಂದ ಅವರು ಈ ಷಡ್ಯಂತ್ರದ ಹಿಂದಿರುವ ಖೂಳರ ಬಗ್ಗೆ ತನಿಖೆಯನ್ನು ಎನ್.ಐ.ಎಗೆ ವಹಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮುರಳಿ, ಚಿಂತಾಮಣಿ ಮಂಡಲ ಅಧ್ಯಕ್ಷ ರಾಜಣ್ಣ, ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ, ಕನಕ ಪ್ರಸಾದ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಜಗದೀಶ್, ಒಕ್ಕಲಿಗರ ಯುವ ವೇದಿಕೆ ಸೇನೆ ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ, ರಾಮಕೃಷ್ಣಪ್ಪ, ಮಂಜುಳಮ್ಮ ಹಾಜರಿದ್ದರು.
ಧರ್ಮಸ್ಥಳ ಕ್ಷೇತ್ರದ ವಿರುದ್ದ ನಡೆದ ಷಡ್ಯಂತ್ರವನ್ನು ವಿರೋಧಿಸಿ ಹಾಗೂ ಈ ಪ್ರಕರಣವನ್ನು ಎಸ್.ಐ.ಟಿ ಬದಲಿಗೆ ಎನ್.ಐ.ಎಗೆ ವಹಿಸುವಂತೆ ಆಗ್ರಹಿಸಿ ಆ.25ರ ಸೋಮವಾರ ಜಿಲ್ಲಾದ್ಯಂತ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಶ್ರೀಧರ್ಮಸ್ಥಳ ಧಾರ್ಮಿಕ ಕೇಂದ್ರದ ಎಲ್ಲ ಭಕ್ತರು, ಹಿಂದೂಪರ ಎಲ್ಲ ಸಂಘಟನೆಗಳು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಗೆ ಬಿಜೆಪಿಯೂ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ ಎಂದು ವಿವರಿಸಿದರು.
ಶಿಡ್ಲಘಟ್ಟದಲ್ಲಿ ಸಾರಿಗೆ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಮನವಿ ಪತ್ರವನ್ನು ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.